ಜೀವನದಲ್ಲಿ ಎಲ್ಲರೂ ಹುಡುಕುವ ಒಂದೇ ಒಂದು ಪದ ಅಂದ್ರೆ ಅದು ಶಾಂತಿ. ಹಣದಲ್ಲಿ, ಸಂಬಂಧಗಳಲ್ಲಿ, ಯಶಸ್ಸಿನಲ್ಲಿ, ದೂರ ಪ್ರಯಾಣದಲ್ಲಿ… ಎಲ್ಲೆಲ್ಲೋ ಅದನ್ನು ಹುಡುಕುತ್ತಾ ನಾವು ನಿರಂತರ ಓಡುತ್ತಿರುತ್ತೇವೆ. ಆದರೆ ಆ ಹುಡುಕಾಟದ ಮಧ್ಯೆ, ನಾವು ಗಮನಿಸದೇ ಕೆಲವು ಅಮೂಲ್ಯ ಸಂಗತಿಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತೇವೆ.
ಶಾಂತಿ ಮುಂದೆ ಸಿಗುತ್ತದೆ ಅನ್ನುವ ಭಾವನೆಯಿಂದ, ಈಗಿನ ಕ್ಷಣವನ್ನು ನಾವು ಕಡೆಗಣಿಸುತ್ತೇವೆ. ನಾಳೆಯ ನೆಮ್ಮದಿಗಾಗಿ ಇವತ್ತಿನ ನಗುವನ್ನು ತ್ಯಜಿಸುತ್ತೇವೆ.
ಬೃಹತ್ ಸಾಧನೆಗಳಲ್ಲೇ ಶಾಂತಿ ಇದೆ ಅನ್ನುವ ನಂಬಿಕೆ, ಸಣ್ಣ ಸಂತೋಷಗಳ ಮೌಲ್ಯವನ್ನು ಮರೆಸುತ್ತದೆ. ಒಂದು ನಿಶ್ಚಿಂತೆ ಉಸಿರು, ಒಬ್ಬರ ನಗು ಇವೆಲ್ಲಾ ಗಮನಕ್ಕೆ ಬಾರದೇ ಹೋಗುತ್ತವೆ.
ಅವರು ಶಾಂತವಾಗಿದ್ದಾರೆ ಅಂತ ನಾವು ಕೂಡ ಅವರಂತೆ ಆಗಲು ಯತ್ನಿಸಿದಾಗ, ನಾವು ನಮ್ಮ ಸಹಜ ಸ್ವಭಾವದಿಂದ ದೂರವಾಗುತ್ತೇವೆ. ಹೀಗೆ ನಿಜವಾದ ನಾವು ನಮ್ಮ ತನವನ್ನು ನಿಧಾನವಾಗಿ ಕಳೆದುಕೊಳ್ಳುತ್ತೇವೆ.
“ನನಗೆ ಶಾಂತಿ ಬೇಕು” ಅನ್ನುವ ನೆಪದಲ್ಲಿ, ಕೆಲವೊಮ್ಮೆ ನಾವು ಸಂಬಂಧಗಳಿಂದ ಹಿಂದೆ ಸರಿಯುತ್ತೇವೆ. ಆದರೆ ಆ ದೂರವೇ ಮುಂದೆ ಒಂಟಿತನವಾಗಿ ಕಾಡುತ್ತದೆ.
ಎಲ್ಲಾ ನೋವನ್ನೂ ತಳ್ಳಿಹಾಕಿ ಶಾಂತಿ ಬೇಕು ಅನ್ನೋ ಆಸೆ, ನಮಗೆ ಭಾವನೆಗಳನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶವನ್ನೇ ಕಸಿದುಕೊಳ್ಳುತ್ತದೆ. ನೋವಿಲ್ಲದೆ ಶಾಂತಿ ಸಂಪೂರ್ಣವಾಗುವುದಿಲ್ಲ.
ಶಾಂತಿ ಎಂದರೆ ಗೊಂದಲವಿಲ್ಲದ ಜೀವನ ಅನ್ನೋ ಭ್ರಮೆ, ಬದುಕಿನ ನೈಜ ಮುಖವನ್ನು ಒಪ್ಪಿಕೊಳ್ಳಲು ಬಿಡುವುದಿಲ್ಲ. ಜೀವನ ಎಂದರೆ ಏರುಪೇರುಗಳೇ, ಅದನ್ನು ಒಪ್ಪಿಕೊಂಡಾಗಲೇ ನಿಜವಾದ ಶಾಂತಿ ಹುಟ್ಟುತ್ತದೆ.


