January16, 2026
Friday, January 16, 2026
spot_img

ಮಕ್ಕಳಿಗೆ ಖುಷಿ ವಿಷಯ! ಕಬ್ಬನ್ ಪಾರ್ಕ್​ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೈಸರ್ಗಿಕ ಸೌಂದರ್ಯದಿಂದ ಮನಸೂರೆಗೊಳ್ಳುವ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಬಾಲಭವನವು ಚಿಣ್ಣರು ಹಾಗೂ ಯುವಕರಿಗೆ ಅಚ್ಚುಮೆಚ್ಚಿನ ತಾಣವಾಗಿದೆ.

ವಾರಾಂತ್ಯಗಳಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಭೇಟಿ ನೀಡುವ ಈ ಸ್ಥಳದಲ್ಲಿ ಈಗ ಮತ್ತೊಂದು ಪ್ರಮುಖ ಆಕರ್ಷಣೆ ಸೇರ್ಪಡೆಯಾಗಲು ಸಿದ್ಧವಾಗಿದೆ. ಬಾಲಭವನದಲ್ಲಿ ಅತಿ ಶೀಘ್ರದಲ್ಲೇ ಆಧುನಿಕ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ.

ಬಾಲಭವನ ಸೊಸೈಟಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಭಾಗದಲ್ಲಿರುವ ಬೋಟಿಂಗ್ ಪ್ರದೇಶದ ಬಳಿ, ಬಾಲಭವನದ ಅರ್ಧ ಎಕರೆ ಜಾಗದಲ್ಲಿ ಈ ಪಾರ್ಕ್ ರೂಪುಗೊಳ್ಳಲಿದೆ.

ಹೈಬ್ರಿಡ್ ಮಾದರಿಯಲ್ಲಿ ನಿರ್ಮಾಣವಾಗುವ ಈ ಸ್ಕೇಟಿಂಗ್ ಪಾರ್ಕ್‌ನಲ್ಲಿ ಒಂದೇ ಸಮಯದಲ್ಲಿ ಸುಮಾರು 40 ಮಂದಿ ಸ್ಕೇಟಿಂಗ್ ಬೋರ್ಡ್ ಬಳಸುವ ಅವಕಾಶವಿರಲಿದೆ. ಒಲಿಂಪಿಕ್ಸ್ ಮಟ್ಟದ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್ ವಿನ್ಯಾಸಗೊಳ್ಳುತ್ತಿದ್ದು, ಐದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ.

ಜನವರಿಯ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದ್ದು, ಮೇ ತಿಂಗಳ ವೇಳೆಗೆ ಸ್ಕೇಟಿಂಗ್ ಪಾರ್ಕ್‌ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಬಾಲಭವನದಲ್ಲಿ ಮತ್ತೊಂದು ಕ್ರೀಡಾ ಚಟುವಟಿಕೆ ಆರಂಭವಾಗುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

Must Read

error: Content is protected !!