ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಈ ವರ್ಷ ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಈ ಬೆಳವಣಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತ ದೆಹಲಿಗೆ ತೆರಳಿದ್ದು, ಈ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಶನಿವಾರ ಚಂಪೈ ಸೊರೆನ್ ಕೋಲ್ಕತ್ತಾದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಸದ್ಯ ಚಂಪೈ ಸೊರೆನ್ ಅವರು ಜೆಎಂಎಂನ ನಾಲ್ವರು ನಾಯಕರೊಂದಿಗೆ ದೆಹಲಿಗೆ ಹಾರಿದ್ದಾರೆ.
ಮತ್ತೊಂದೆಡೆ ಚಂಪೈ ಸೊರೆನ್ ಅವರು ತಮ್ಮ ಎಕ್ಸ್ ಪ್ರೊಫೈಲ್‌ನಿಂದ ಜೆಎಂಎಂ ಹೆಸರನ್ನು ತೆಗೆದುಹಾಕಿದ್ದಾರೆ. ಹೀಗಾಗಿ ಬಿಜೆಪಿ ಸೇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
ಇತ್ತ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ಚಂಪೈ ಸೊರೆನ್ ತಾವು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಸುದ್ದಿಯನ್ನು ನಿರಾಕರಿಸಿದ್ದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಹೇಮಂತ್ ಸೊರೆನ್ ( ಅವರನ್ನು ವಶಕ್ಕೆ ಪಡೆದಾಗ ಈ ವರ್ಷದ ಫೆಬ್ರವರಿಯಲ್ಲಿ ಚಂಪೈ ಸೊರೆನ್ ಜಾರ್ಖಂಡನ್ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅವರ ಅಧಿಕಾರಾವಧಿ 5 ತಿಂಗಳಿಗೆ ಕೊನೆಗೊಂಡಿತ್ತು. ಜುಲೈಯಲ್ಲಿ ಹೇಮಂತ್ ಸೊರೆನ್ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ.
ಸದ್ಯ ಚಂಪೈ ಸೊರೆನ್ ಅವರ ದೆಹಲಿ ಪ್ರವಾಸ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವಾಗಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿರುವ ಜೆಎಂಎಂ ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಅವರನ್ನು ಸಂಪೈ ಸೊರೆನ್ ಇತ್ತೀಚೆಗೆ ಭೇಟಿಯಾಗಿದ್ದರು. ಅದಾದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.