January16, 2026
Friday, January 16, 2026
spot_img

Interesting Facts | ಪ್ರಪಂಚದಲ್ಲಿ ಅತಿ ಹೆಚ್ಚು ಪಿರಮಿಡ್‌ಗಳಿರುವ ದೇಶ ಈಜಿಪ್ಟ್ ಅಲ್ಲ! ಮತ್ತಿನ್ಯಾವುದು?

ಪಿರಮಿಡ್ ಎಂದರೆ ನಮ್ಮ ಕಣ್ಣಮುಂದೆ ಮೊದಲು ಮೂಡುವ ಚಿತ್ರ ಈಜಿಪ್ಟ್‌ನ ಗಿಜಾ ಮರುಭೂಮಿ ಪ್ರದೇಶ. ಸಾವಿರಾರು ವರ್ಷಗಳ ಹಿಂದಿನ ರಹಸ್ಯ, ರಾಜವಂಶಗಳ ವೈಭವ ಮತ್ತು ಅಚ್ಚರಿಯ ವಾಸ್ತುಶಿಲ್ಪ ಇವೆಲ್ಲವೂ ಈಜಿಪ್ಟ್‌ನ್ನು ಪಿರಮಿಡ್‌ಗಳ ದೇಶವೆಂದು ನಾವು ಕಲ್ಪಿಸಿಕೊಂಡಿದ್ದೇವೆ. ಆದರೆ ಇತಿಹಾಸದ ಪುಟಗಳನ್ನು ಸ್ವಲ್ಪ ಆಳವಾಗಿ ತೆರೆದರೆ, ಈ ಕಲ್ಪನೆಗೆ ಸವಾಲು ಹಾಕುವ ಒಂದು ಅಚ್ಚರಿ ಸತ್ಯ ಎದುರಾಗುತ್ತದೆ. ವಾಸ್ತವದಲ್ಲಿ ಪ್ರಪಂಚದಲ್ಲಿ ಅತಿ ಹೆಚ್ಚು ಪಿರಮಿಡ್‌ಗಳಿರುವ ದೇಶ ಈಜಿಪ್ಟ್ ಅಲ್ಲ. ಹಾಗಾದರೆ ಆ ದೇಶ ಯಾವುದು? ಉತ್ತರ ಕೇಳಿದರೆ ನಿಮಗೂ ಆಶ್ಚರ್ಯವಾಗುವುದು ಖಚಿತ.

ಈಜಿಪ್ಟ್‌ನಲ್ಲಿ ಸುಮಾರು 130ಕ್ಕೂ ಹೆಚ್ಚು ಪಿರಮಿಡ್‌ಗಳು ದಾಖಲಾಗಿವೆ. ಇವು ಫರೋಗಳ ಸಮಾಧಿಗಳಾಗಿ ನಿರ್ಮಿಸಲ್ಪಟ್ಟಿದ್ದು, ಕಲ್ಲಿನಿಂದ ಮಾಡಿದ ಭವ್ಯ ರಚನೆಗಳಾಗಿವೆ. ಆದರೆ ಪಿರಮಿಡ್‌ಗಳ ಸಂಖ್ಯೆಯ ವಿಷಯಕ್ಕೆ ಬಂದಾಗ ಈಜಿಪ್ಟ್‌ನ್ನು ಹಿಂದಿಕ್ಕುವ ದೇಶವೊಂದು ಆಫ್ರಿಕಾದಲ್ಲಿಯೇ ಇದೆ ಹೌದು ಅದು ಸುಡಾನ್. ಹೌದು, ಉತ್ತರ ಆಫ್ರಿಕಾದ ಈ ದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಪಿರಮಿಡ್‌ಗಳು ಇವೆ ಎಂಬುದು ಇತಿಹಾಸಕಾರರ ಅಂದಾಜು.

ಸುಡಾನ್‌ನ ಮೆರೋಯೆ ಪ್ರದೇಶದಲ್ಲಿ ಕಂಡುಬರುವ ಈ ಪಿರಮಿಡ್‌ಗಳು ಕುಶ್ ಸಾಮ್ರಾಜ್ಯದ ಕಾಲಕ್ಕೆ ಸೇರಿವೆ. ಈ ಪಿರಮಿಡ್‌ಗಳು ಈಜಿಪ್ಟ್‌ನ ಪಿರಮಿಡ್‌ಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಸಂಖ್ಯೆಯಲ್ಲಿ ಹೆಚ್ಚು. ಇವು ರಾಜರು, ರಾಣಿಗಳು ಹಾಗೂ ಮಹತ್ವದ ವ್ಯಕ್ತಿಗಳ ಸಮಾಧಿಗಳಾಗಿದ್ದು, ವಿಶೇಷವೆಂದರೆ, ಸುಡಾನ್ ಪಿರಮಿಡ್‌ಗಳ ಶಿಖರಗಳು ಹೆಚ್ಚು ತೀಕ್ಷ್ಣವಾಗಿದ್ದು, ವಿನ್ಯಾಸದಲ್ಲೂ ವಿಭಿನ್ನತೆ ಕಾಣಿಸುತ್ತದೆ.

ಈಜಿಪ್ಟ್ ಪಿರಮಿಡ್‌ಗಳು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದರೆ, ಸುಡಾನ್‌ನ ಪಿರಮಿಡ್‌ಗಳು ಇನ್ನೂ ಅಷ್ಟೊಂದು ಗಮನ ಸೆಳೆಯದೇ ಉಳಿದಿವೆ. ರಾಜಕೀಯ ಅಸ್ಥಿರತೆ, ಪ್ರವಾಸೋದ್ಯಮದ ಕೊರತೆ ಮತ್ತು ಜಾಗತಿಕ ಪ್ರಚಾರದ ಅಭಾವವೇ ಇದಕ್ಕೆ ಪ್ರಮುಖ ಕಾರಣ. ಆದರೂ ಇತಿಹಾಸದ ದೃಷ್ಟಿಯಲ್ಲಿ ನೋಡಿದರೆ, ಪಿರಮಿಡ್‌ಗಳ ನಿಜವಾದ “ಸಂಖ್ಯಾ ಚಾಂಪಿಯನ್” ಎಂಬ ಗೌರವ ಸುಡಾನ್‌ಗೆ ಸಲ್ಲುತ್ತದೆ.

ಹೀಗಾಗಿ, ಪಿರಮಿಡ್‌ಗಳ ಕಥೆ ಕೇವಲ ಈಜಿಪ್ಟ್‌ಗೆ ಸೀಮಿತವಲ್ಲ. ಇತಿಹಾಸವು ಇನ್ನೂ ಅನೇಕ ಅಚ್ಚರಿಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ ಎಂಬುದಕ್ಕೆ ಸುಡಾನ್ ಒಂದು ಜೀವಂತ ಉದಾಹರಣೆ.

Must Read

error: Content is protected !!