ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗದಲ್ಲಿ ರೈಲು ಪರೀಕ್ಷಾರ್ಥ ಸಂಚಾರ ನಡೆಸಲಾಗಿದ್ದು, ಈ ಬಗ್ಗೆ ಬಿಎಂಆರ್ಸಿಎಲ್ ಮಾಹಿತಿ ಹಂಚಿಕೊಂಡಿದ್ದು, ಈ ಮಾರ್ಗವು ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಮ್ಮ ಮೆಟ್ರೋ, ಆ.17ರಂದು ರೀಚ್-3ರ ಎತ್ತರಿಸಿದ ಮಾರ್ಗದಲ್ಲಿನ -ನಾಗಸಂದ್ರದಿಂದ ಮಾದಾವರೆಗಿನ 3.14 ಕಿ.ಮೀ ನಡುವೆ (ರೋಲ್ಲಿಂಗ್ ಸ್ಟಾಕ್) ಮೆಟ್ರೋ ರೈಲು ಮೂಲಕ ಮೊದಲ ಪರೀಕ್ಷಾರ್ಥ ಸಂಚಾರ ನಡೆದಿದೆ. ಕನಿಷ್ಠ 5 ಕಿ.ಮೀ ಮತ್ತು ಗರಿಷ್ಠ 35 ಕಿ.ಮೀ ವೇಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು.
ನಾಗಸಂದ್ರ-ಮಾದಾವರ ನಡುವಿನ ಮೂರು ಕಿ.ಮೀ. ಮೆಟ್ರೋ ಕಾಮಗಾರಿ 2017 ರಲ್ಲಿ ಪ್ರಾರಂಭವಾಯಿತು. 2019 ರ ಮಧ್ಯದ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಿತ್ತಾದರೂ, ಭೂಸ್ವಾಧೀನದಲ್ಲಿ ವಿಳಂಬವಾದ ಕಾರಣ ಕಾಮಗಾರಿ ವಿಳಂಬವಾಗುತ್ತಲೇ ಸಾಗಿತು.
ಪ್ರಾಯೋಗಿಕ ಸಂಚಾರ ಇನ್ನು ಕೆಲ ದಿನಗಳು ನಡೆಯಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಉದ್ಘಾಟನೆ ಮಾಡುವ ಸಾಧ್ಯತೆ ಇದೆ.
ಈ ಮಾರ್ಗದಲ್ಲಿ ನಾಗಸಂದ್ರ, ಮಂಜುನಾಥ ನಗರ, ಜಿಂದಾಲ್, ಮಾದಾವರ ಮೆಟ್ರೋ ನಿಲ್ದಾಣ ಬರಲಿದೆ.