ಮಂಗಳೂರು-ಬೆಂಗಳೂರು ಹಳಿಯ ಮೇಲೆ ಗುಡ್ಡ ಕುಸಿತ: ಭರದಿಂದ ಸಾಗಿದೆ ಮಣ್ಣು ತೆರವು ಕಾರ್ಯಾಚರಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಜಿಲ್ಲೆಯ ಸಕಲೇಶಪುರ ಬಾಳ್ಳುಪೇಟೆಯ ನಡುವಿನ ಆಚಂಗಿ ದೊಡ್ಡ ನಾಗರ ಬಳಿ ರೈಗುಡ್ಡ ಕುಸಿದು ಹಳಿಯ ಮೇಲಿದ್ದ ಬೃಹತ್ ಮಣ್ಣನ್ನು ಭಾನುವಾರ ಸಂಪೂರ್ಣ ತೆರವುಗೊಳಿಸಲಾಗಿದೆ.

ಅಲ್ಲದೆ ಸ್ಥಳದಲ್ಲಿ ಗುಡ್ಡದ ಮೇಲಿಂದ ಕೆಲವು ಕಡೆ ಭದ್ರತಾ ತಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.ಈ ಪ್ರದೇಶದಲ್ಲಿ ಮತ್ತೆ ಕುಸಿತ ಸಂಭವಿಸದಂತೆ ಮರುಕಳಿಸದಂತೆ ಗರಿಷ್ಠ ಪ್ರಮಾಣದಲ್ಲಿ ಭದ್ರತೆಯನ್ನು ರೈಲ್ವೆ ಇಲಾಖೆ ನಡೆಸುತ್ತಿದ್ದೆ. ಕಾಮಗಾರಿ ಪರಿಪೂರ್ಣವಾದ ಬಳಿಕ ಮಂಗಳೂರು-ಬೆಂಗಳೂರು ರೈಲು ಸಂಚಾರ ಆರಂಭವಾಗಲಿದೆ.

ಗುಡ್ಡದ ತುದಿಯಲ್ಲಿನ ಮಣ್ಣು ತೆರವು
ಪ್ರಯಾಣಿಕರ ಗರಿಷ್ಠ ಸುರಕ್ಷತಾ ದೃಷ್ಠಿಯಿಂದ ಕಾಮಗಾರಿ ಪರಿಪೂರ್ಣವಾದ ಬಳಿಕ ಮತ್ತು 100% ಸುರಕ್ಷಿತ ಎಂದು ಮನಗಂಡ ಬಳಿಕವೇ ರೈಲ್ವೆ ಇಲಾಖೆ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಿದೆ ಎನ್ನಲಾಗಿದೆ. ಕುಸಿತಗೊಂಡ ಗುಡ್ಡದ ತುತ್ತ ತುದಿಯಲ್ಲಿ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಮೂಲಕ ಸಡಿಲಗೊಂಡ ಮಣ್ಣನ್ನು ತೆರವು ಮಾಡುವ ಕಾರ್ಯ ನಡೆಸಲಾಗುತ್ತಿದೆ.

ಅಂತರ್ಜಲದ ಹರಿಯುವಿಕೆ ಕಾರಣದಿಂದ ಗುಡ್ಡದ ತುದಿಯಿಂದ ಕೆಳಕ್ಕೆ ಸಡಿಲಗೊಂಡ ಮಣ್ಣನ್ನು ತೆರವು ಮಾಡುವ ಕಾರ್ಯ ಭರದಿಂದ ಸಾಗಿದೆ. ಗರಿಷ್ಠ ಮಟ್ಟದಲ್ಲಿ ಮರಳಿನ ಚೀಲ, ಕಲ್ಲುಗಳನ್ನು ಉಪಯೋಗಿಸಿಕೊಂಡು ಬಲಿಷ್ಠ ನೆಟ್ ಬಳಸಿ ಕೂಡಾ ಗುಡ್ಡದ ಕೆಲವು ಕಡೆ ರಕ್ಷಣಾ ಕವಚ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ.ಈ ಮೂಲಕ ಗುಡ್ಡ ಮತ್ತೆ ಕುಸಿಯದಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

 

ರೈಲುಗಳು ರದ್ದು:
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಆಚಂಗಿ ದೊಡ್ಡನಾಗರ ಪ್ರದೇಶದಲ್ಲಿ ಗುಡ್ಡ ಕುಸಿದಿಂದಾಗಿ ಆ.19 ಮತ್ತು 20 ರಂದು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಆ.18 ಮತ್ತು 19 ರಂದು ರಂದು ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ(16585), ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು (16586), ಕೆಎಸ್‌ಆರ್ ಬೆಂಗಳೂರು-ಕಾರವಾರ(16595), ಕಾರವಾರ-ಕೆಎಸ್‌ಆರ್ ಬೆಂಗಳೂರು(16596), ಕೆಎಸ್‌ಆರ್ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್(16511), ಕಣ್ಣೂರು-ಕೆಎಸ್‌ಆರ್ ಬೆಂಗಳೂರು(16512),ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್(16515), ವಿಜಯಪುರ-ಮಂಗಳೂರು ಸೆಂಟ್ರಲ್(7377) ರದ್ದುಗೊಂಡಿದೆ. ಆ.19 ಮತ್ತು ಆ.20ರಂದು ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್(16516), ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್(07378) ರದ್ದುಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!