ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮನೆ ಹಾಗೂ ಫ್ಲ್ಯಾಟ್ ಹಂಚಿಕೆ ಸಂಬಂಧಿತ ಪ್ರಮುಖ ನಿಯಮದಲ್ಲಿ ಬದಲಾವಣೆ ಮಾಡಿದೆ. ಇದುವರೆಗೆ ಬಿಡಿಎ ಮನೆ ಅಥವಾ ಫ್ಲ್ಯಾಟ್ ಪಡೆಯಲು ಬೆಂಗಳೂರಿನಲ್ಲಿ ಕನಿಷ್ಠ 10 ವರ್ಷ ವಾಸ ಮಾಡಿರಬೇಕು ಎಂಬ ಷರತ್ತು ಇತ್ತು. ಆದರೆ ಇದೀಗ ಆ ನಿಯಮವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಈ ಬದಲಾವಣೆಯಿಂದ ಹೊರ ರಾಜ್ಯದವರಿಗೂ ಬಿಡಿಎ ಮನೆ ಪಡೆಯುವ ಅವಕಾಶ ಸಿಕ್ಕಿದೆ.
ಬಿಡಿಎ ನಿರ್ಮಿಸಿರುವ ಅನೇಕ ಮನೆಗಳು ಮಾರಾಟವಾಗದೆ ಉಳಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶದಿಂದಲೇ ನಿಯಮ ಸಡಿಲಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ಬದಲಾವಣೆ ಸೈಟ್ ಖರೀದಿಗೆ ಅನ್ವಯಿಸುವುದಿಲ್ಲ ಎಂದು ಬಿಡಿಎ ಸ್ಪಷ್ಟಪಡಿಸಿದೆ.
ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಅರ್ಜಿದಾರರು ಬೆಂಗಳೂರಿನ ವಿಳಾಸ ಹೊಂದಿರಬೇಕು. ಕನಿಷ್ಠ ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಾಗಿರಬೇಕು ಹಾಗೂ ಆಧಾರ್ ಕಾರ್ಡ್‌ನಲ್ಲಿ ಬೆಂಗಳೂರು ವಿಳಾಸ ಇರಬೇಕು. ಹೊರ ರಾಜ್ಯದವರಾದರೂ, ಬೆಂಗಳೂರಿನಲ್ಲಿ ಎರಡು ವರ್ಷ ವಾಸಿಸಿದ ದಾಖಲೆ ಇದ್ದರೆ ಮನೆಗೆ ಅರ್ಜಿ ಸಲ್ಲಿಸಬಹುದು.
ಸೈಟ್ ಖರೀದಿಗೆ ಸಂಬಂಧಿಸಿದ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಡಿಎ ಮತ್ತೊಮ್ಮೆ ಸ್ಪಷ್ಟಪಡಿಸಿದೆ.


