ತಾಮ್ರದ ಉಂಗುರ, ಕೈ ಖಡ್ಗ ಅಥವಾ ಸರ ಹಾಕಿಕೊಂಡ ಮೇಲೆ ಕೆಲವೇ ಗಂಟೆಗಳಲ್ಲಿ ಚರ್ಮ ಹಸಿರು ಬಣ್ಣಕ್ಕೆ ತಿರುಗಿದ ಅನುಭವ ಹಲವರಿಗೆ ಆಗಿರುತ್ತದೆ. ಕೆಲವರು ಇದನ್ನು ಅಲರ್ಜಿ ಅಥವಾ ನಮಗೆ ಈ ತಾಮ್ರ ಸೂಟ್ ಆಗಲ್ಲ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ನಮ್ಮ ದೇಹದ ಸಮಸ್ಯೆಯಲ್ಲ, ತಾಮ್ರ ಮತ್ತು ಪರಿಸರದ ನಡುವೆ ನಡೆಯುವ ಒಂದು ಸರಳವಾದ ರಸಾಯನಿಕ ಪ್ರತಿಕ್ರಿಯೆ. ಈ ಹಸಿರು ಬಣ್ಣ ಕಾಣಿಸಿಕೊಂಡರೆ ಭಯಪಡುವ ಅಗತ್ಯವೇ ಇಲ್ಲ. ಅದರ ಹಿಂದಿರುವ ಕಾರಣಗಳನ್ನು ತಿಳಿದರೆ ಗೊಂದಲವೇ ಉಳಿಯುವುದಿಲ್ಲ.
- ನಮ್ಮ ಚರ್ಮದಿಂದ ಹೊರಬರುವ ಬೆವರಿನಲ್ಲಿ ನೀರು, ಉಪ್ಪು ಹಾಗೂ ಸ್ವಲ್ಪ ಆಮ್ಲೀಯ ಗುಣಗಳಿರುತ್ತವೆ. ತಾಮ್ರ ಈ ಬೆವರಿನ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಇದರಿಂದ “ಕಾಪರ್ ಸಾಲ್ಟ್” ಎಂಬ ಸಂಯುಕ್ತ ಉಂಟಾಗಿ ಅದು ಹಸಿರು ಬಣ್ಣದ ಗುರುತುಗಳಾಗಿ ಚರ್ಮದ ಮೇಲೆ ಕಾಣಿಸುತ್ತದೆ ಅಷ್ಟೆ.
- ತಾಮ್ರ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಪ್ರತಿಕ್ರಿಯೆ ಮಾಡಿ “ಕಾಪರ್ ಆಕ್ಸೈಡ್” ಅಥವಾ “ಕಾಪರ್ ಕಾರ್ಬೊನೇಟ್” ರೂಪಿಸುತ್ತದೆ. ಇದೇ ಸಂಯುಕ್ತ ಹಸಿರು ಬಣ್ಣಕ್ಕೆ ಕಾರಣವಾಗುತ್ತದೆ. ಇದು ತಾಮ್ರದ ಸಹಜ ಗುಣ, ದೋಷವಲ್ಲ.
- ದೇಹದ pH ಮಟ್ಟವೂ ಕಾರಣ: ಕೆಲವರ ಚರ್ಮ ಹೆಚ್ಚು ಆಮ್ಲೀಯವಾಗಿರುತ್ತದೆ. ಅಂಥವರಲ್ಲಿ ತಾಮ್ರದ ಪ್ರತಿಕ್ರಿಯೆ ವೇಗವಾಗಿ ನಡೆಯುವುದರಿಂದ ಹಸಿರು ಗುರುತುಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸಬಹುದು.
- ಸಾಮಾನ್ಯವಾಗಿ ತಾಮ್ರದಿಂದ ಆಗುವ ಈ ಹಸಿರು ಬಣ್ಣ ಆರೋಗ್ಯಕ್ಕೆ ಅಪಾಯಕಾರಿಯಲ್ಲ. ಇದು ತಾತ್ಕಾಲಿಕವಾಗಿದ್ದು, ನೀರು ಮತ್ತು ಸಾಬೂನಿನಿಂದ ತೊಳೆಯುತ್ತಿದ್ದಂತೆ ಹೋಗಿಬಿಡುತ್ತದೆ.
ಒಟ್ಟಿನಲ್ಲಿ, ತಾಮ್ರದ ಆಭರಣದಿಂದ ಚರ್ಮ ಹಸಿರು ಬಣ್ಣಕ್ಕೆ ತಿರುಗುವುದು ಅಸ್ವಾಭಾವಿಕವಲ್ಲ. ಇದು ವಿಜ್ಞಾನ ಹೇಳುವ ಸಹಜ ಪ್ರಕ್ರಿಯೆ ಅದರಲ್ಲೇ ತಾಮ್ರದ ನಿಜವಾದ ಸ್ವಭಾವ ಅಡಗಿದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)


