January16, 2026
Friday, January 16, 2026
spot_img

ಇದ್ಯಾವ ಸ್ಟೈಲ್? | ಹುಡುಗರ ವೇಷದಲ್ಲಿ ಮನೆಗಳ್ಳತನ: ಖರ್ನಾಕ್ ಕಳ್ಳಿಯರು ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಮನೆಗಳ್ಳತನಕ್ಕೆ ಹೊಸ ತಂತ್ರ ಬಳಸುತ್ತಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗರಂತೆ ಬಟ್ಟೆ ಧರಿಸಿ, ಬೈಕ್‌ನಲ್ಲಿ ಸಂಚರಿಸುತ್ತಾ ನಿರ್ಜನ ಪ್ರದೇಶಗಳ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಈ ಪ್ರಕರಣ ಇದೀಗ ಬಹಿರಂಗವಾಗಿದೆ.

ಜನವರಿ 13ರಂದು ಸಂಪಿಗೆಹಳ್ಳಿಯ ನಿವಾಸಿ ಸಂಗಮೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ದೃಶ್ಯಗಳಲ್ಲಿ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿರುವಂತೆ ಕಾಣಿಸಿಕೊಂಡಿದ್ದು, ಅದೇ ಸುಳಿವಿನ ಆಧಾರದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಆದರೆ ಆರೋಪಿಗಳನ್ನು ವಶಕ್ಕೆ ಪಡೆದಾಗ, ಅವರು ಹುಡುಗರಲ್ಲ, ಹುಡುಗಿಯರು ಎಂಬ ಸತ್ಯ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ಶಾಲು ಮತ್ತು ನೀಲು ಎಂದು ಗುರುತಿಸಲಾಗಿದ್ದು, ಇಬ್ಬರೂ ಟ್ಯಾನರಿ ರಸ್ತೆಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ಯಾಂಟ್, ಶರ್ಟ್, ಟೋಪಿ ಧರಿಸಿ ಹುಡುಗರಂತೆ ಕಾಣುವಂತೆ ವೇಷಭೂಷಣ ಮಾಡಿಕೊಂಡು, ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಇವರು, ಹಗಲಿನ ಹೊತ್ತಲ್ಲೇ ಜನಸಂಚಾರ ಕಡಿಮೆ ಇರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದರು.

ಪೊಲೀಸರ ಪ್ರಕಾರ, ಈ ಇಬ್ಬರು ಹಲವು ಕಡೆಗಳಲ್ಲಿ ಇದೇ ರೀತಿಯ ಕೃತ್ಯ ಎಸಗಿರುವ ಶಂಕೆ ಇದೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮತ್ತಷ್ಟು ಪ್ರಕರಣಗಳಲ್ಲಿ ಅವರ ಪಾತ್ರವಿದೆಯೇ ಎಂಬ ಕುರಿತು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Must Read

error: Content is protected !!