ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮತ್ತು ಮುಂಬೈ ನಡುವೆ ಆಗಾಗ್ಗೆ ಸಂಚರಿಸುವ ಪ್ರಯಾಣಿಕರಿಗೆ ರೈಲು ಪ್ರಯಾಣದ ಅನುಭವವೇ ಬದಲಾಗುವ ಲಕ್ಷಣಗಳು ಕಾಣಿಸುತ್ತಿವೆ. ದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದ ಈ ಪ್ರಮುಖ ಮಾರ್ಗದಲ್ಲಿ ವೇಗದ ಹಾಗೂ ಆರಾಮದಾಯಕ ಪ್ರಯಾಣ ಒದಗಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಹೊಸ ಯೋಜನೆ ಮೇಲೆ ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ, ಬೆಂಗಳೂರು–ಮುಂಬೈ ನಡುವೆ ದುರಂತೋ ಎಕ್ಸ್‌ಪ್ರೆಸ್ ರೈಲು ಆರಂಭಿಸುವ ಪ್ರಸ್ತಾವನೆ ಚರ್ಚೆಯಲ್ಲಿದ್ದು, ಇದು ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ
ಇತ್ತೀಚೆಗೆ ಬೆಂಗಳೂರು ಎಸ್‌ಎಂವಿಟಿ ಹಾಗೂ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವಿನ ಹೊಸ ಸೂಪರ್‌ಫಾಸ್ಟ್ ರೈಲು ಸೇವೆಗೆ ಅನುಮೋದನೆ ದೊರೆತಿತ್ತು. ಆದರೆ 1,200 ಕಿಲೋಮೀಟರ್‌ಗಿಂತ ಹೆಚ್ಚಿನ ದೂರವನ್ನು ಕ್ರಮಿಸುವ ಈ ರೈಲು ಸುಮಾರು 24 ಗಂಟೆಗಳ ಕಾಲ ತೆಗೆದುಕೊಳ್ಳುತ್ತಿರುವುದರಿಂದ ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೆಚ್ಚಿನ ನಿಲ್ದಾಣಗಳು ಹಾಗೂ ದೀರ್ಘ ಪ್ರಯಾಣ ಸಮಯವೇ ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆ, ಕೆಎಸ್‌ಆರ್ ಬೆಂಗಳೂರು ಮತ್ತು ಮುಂಬೈನ ಸಿಎಸ್ಎಂಟಿ ನಡುವೆ ದುರಂತೋ ಎಕ್ಸ್‌ಪ್ರೆಸ್ ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎನ್ನಲಾಗುತ್ತಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್ ಹಾಗೂ ಪುಣೆ ಮಾರ್ಗವಾಗಿ ಈ ರೈಲು ಸಂಚರಿಸಬಹುದು. ಕಡಿಮೆ ನಿಲ್ದಾಣಗಳು, ಹೆಚ್ಚಿನ ವೇಗ ಮತ್ತು ಟಿಕೆಟ್ ಜೊತೆ ಊಟದ ಸೌಲಭ್ಯ ದುರಂತೋ ರೈಲುಗಳ ಪ್ರಮುಖ ವಿಶೇಷತೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ರೈಲು ಸಂಜೆ ವೇಳೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ ಮುಂಬೈ ತಲುಪುವ ಸಾಧ್ಯತೆ ಇದೆ. ಆದರೆ ವೇಳಾಪಟ್ಟಿ ಹಾಗೂ ಟಿಕೆಟ್ ದರದ ಬಗ್ಗೆ ರೈಲ್ವೆ ಇಲಾಖೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.


