ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಮೊದಲ ಆದಿವಾಸಿ ಗ್ರಂಥಾಲಯ ‘ಕಾನು’ ಆಗಸ್ಟ್ 25 ರಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿದೆ.
‘ಕಾನು’ ಎಂದರೆ ಸೋಲಿಗ ಭಾಷೆಯಲ್ಲಿ ನಿತ್ಯಹರಿದ್ವರ್ಣ ಕಾಡು ಎಂದರ್ಥ. ಇದು ದಕ್ಷಿಣ ಭಾರತದ ಮೊದಲ ಆದಿವಾಸಿ ಜ್ಞಾನ ಕೇಂದ್ರವಾಗಲಿದೆ
ದಕ್ಷಿಣ ಭಾರತ ಆದಿವಾಸಿ ಜ್ಞಾನ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸುತ್ತಮುತ್ತಲ ಸೋಲಿಗ ಜನಾಂಗದ ಜ್ಞಾನ ಪರಂಪರೆ, ನೈಪುಣ್ಯತೆ, ಕಲೆ, ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಹಾಡಿಗಳ ಇತಿಹಾಸ, ಅರಣ್ಯ ಆಧಾರಿತ ಕೃಷಿ, ಕಟ್ಟುಪಾಡು, ಸಾಮಾಜಿಕ ವ್ಯವಸ್ಥೆ ಮೊದಲಾದ ಸಂಕೀರ್ಣ ವ್ಯವಸ್ಥೆಗಳ ಬಗ್ಗೆ ಬಂದಿರುವ ಪ್ರಕಟಣೆಗಳ ಬಗ್ಗೆ ತಿಳಿಸಲಾಗುತ್ತದೆ.
‘ಕಾನು’ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಕಟ್ಟಡದಲ್ಲಿ 1,200 ಪುಸ್ತಕಗಳು, ಸಂಶೋಧನಾ ಪ್ರಬಂಧಗಳು ಮತ್ತು ಆದಿವಾಸಿಗಳು ಮತ್ತು ಆದಿವಾಸಿಗಳಲ್ಲದ ದಕ್ಷಿಣ ಭಾರತದ ಅರಣ್ಯ ಬುಡಕಟ್ಟುಗಳ ಸಮಕಾಲೀನ ಕೃತಿಗಳೊಂದಿಗೆ ಸ್ಥಾಪಿಸಲಾಗಿದೆ. ಅರಣ್ಯಗಳಲ್ಲಿ ವಾಸಿಸುವ ಬುಡಕಟ್ಟು ಜನರ ಕುರಿತು ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ‘ಕಾನು’ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.