ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಸಿದ್ಧ ಶಾಪಿಂಗ್ ಮಾಲ್ ಡಿಮಾರ್ಟ್ ನ ಶಾಖೆಯು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ-ಬೈಪಾಸ್ ಎಂಬಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಇರೋದಾಗಿ ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಹರಿಬಿಟ್ಟಿದ್ದಾರೆ. ಉದ್ಯೋಗ ಅರಸಿ ಮಾಲ್ ಕಡೆಗೆ ಧಾವಿಸಿ ಬಂದ ನೂರಾರು ಮುಗ್ಧ ಜನರಿಗೆ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಯಾವ ಕೆಲಸವೂ ಖಾಲಿ ಇಲ್ಲ ಎಂದು ಹೇಳಿ ವಾಪಾಸ್ ಕಳಿಸಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಎಷ್ಟರ ಮಟ್ಟಿಗೆ ದುರುಪಯೋಗಪಡಿಸಬಹುದೆಂಬುದಕ್ಕೆ ಕುಂಪಲ-ಬೈಪಾಸಿನ ನೂತನ ಡಿಮಾರ್ಟ್ ನಲ್ಲಿ ಉದ್ಯೋಗಾವಕಾಶದ ಜಾಹೀರಾತು ಹರಿಬಿಟ್ಟ ಬೆಳವಣಿಗೆಯೇ ತಾಜಾ ನಿದರ್ಶನವೆಂಬಂತಿದೆ. ಜಾಲತಾಣಗಳಲ್ಲಿ ಇಂತಹ ಕಂಟೆಂಟ್ ಗಳನ್ನ ಸೃಷ್ಟಿಸುವವರಿಗೆ ಮನಸ್ಸಿಗೆ ಒಂದಷ್ಟು ವಿಘ್ನ ಸಂತೋಷ ಲಭಿಸಬಹುದು. ಆದರೆ ಇಂತಹ ಸುಳ್ಳು ಜಾಹೀರಾತುಗಳನ್ನೇ ನಂಬಿ ಕೆಲಸ ಅರಸಿ ಬಂದವರ ಗೋಳನ್ನು ಕೇಳುವಾಗ ನಿಜಕ್ಕೂ ಎಂತವರಿಗೂ ಬೇಸರವಾಗದೆ ಇರಲಾರದು.
ಕುಂಪಲ-ಬೈಪಾಸ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಿಮಾರ್ಟ್ ಶಾಪಿಂಗ್ ಮಾಲ್ಗೆ ಸಿಬ್ಬಂದಿ ಬೇಕಾಗಿದ್ದು, ಅನಕ್ಷರಸ್ಥರಿಂದ-ಪದವೀಧರರಿಗೆ ಉದ್ಯೋಗಾವಕಾಶಗಳು ಲಭ್ಯವಿದೆಯೆಂಬ ಜಾಹೀರಾತನ್ನ ಯಾರೋ ವಿಘ್ನ ಸಂತೋಷಿಗಳು ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಿಶೇಷವೆಂದರೆ ಈ ಜಾಹೀರಾತಿನಲ್ಲಿ ಡಿಮಾರ್ಟ್ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಫೋನ್ ನಂಬರ್,ಇ-ಮೇಲ್ ವಿಳಾಸಗಳನ್ನೂ ಹಾಕಿಲ್ಲ. ಅನೇಕ ಮಂದಿ ಸುಶಿಕ್ಷಿತರು ಕೂಡ ಇಂತಹ ಜಾಹೀರಾತುಗಳನ್ನ ಸರಿಯಾಗಿ ಪರಿಶೀಲಿಸದೆ ವಿವಿಧ ವಾಟ್ಸಪ್ ಗ್ರೂಪ್ಗಳಿಗೆ ನೂಕಿದ್ದಲ್ಲದೆ, ತಮ್ಮ ಸ್ಟೇಟಸ್ ಗಳಿಗೂ ಅಪ್ಲೋಡ್ ಮಾಡಿದ್ದರು.
ಇದನ್ನೇ ನಂಬಿದ ಮುಗ್ಧ ಜನರು ನಿನ್ನೆಯಿಂದ ಬೈಪಾಸಿನ ಡಿಮಾರ್ಟ್ ಎದುರಲ್ಲಿ ಜಮಾಯಿಸಿದ್ದು ಕೆಲಸಕ್ಕಾಗಿ ಮುಗಿ ಬಿದ್ದಿದ್ದಾರೆ.ಅಸಲಿಗೆ ಡಿಮಾರ್ಟ್ ಸಂಸ್ಥೆಯು ಉದ್ಯೋಗಾವಕಾಶದ ಬಗ್ಗೆ ಯಾವುದೇ ಜಾಹೀರಾತು ನೀಡಿಲ್ಲವೆಂದು ಉದ್ಯೋಗ ಅರಸಿ ಬಂದ ಜನರಲ್ಲಿ ಡಿಮಾರ್ಟ್ ನ ಸೆಕ್ಯುರಿಟಿ ಸಿಬ್ಬಂದಿ ಸಮಜಾಯಿಷಿ ನೀಡಿ ಬೇಸ್ತು ಬಿದ್ದಿದ್ದಾರೆ.
ಇದೇ ಫೆಬ್ರವರಿ ತಿಂಗಳ ಕೊನೆಯೊಳಗೆ ಡಿಮಾರ್ಟ್ ಶಾಪಿಂಗ್ ಮಾಲ್ ವಹಿವಾಟು ಆರಂಭಿಸಲಿದ್ದು ,ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ನಿನ್ನೆಯಿಂದ ಸುಮಾರು ಐನೂರಕ್ಕೂ ಅಧಿಕ ಮಂದಿ ಇಲ್ಲಿಗೆ ಉದ್ಯೋಗ ಅರಸಿ ಬರುತ್ತಲೇ ಇದ್ದಾರೆಂದು ಡಿಮಾರ್ಟ್ ಶಾಪಿಂಗ್ ಮಾಲ್ ನ ಸೆಕ್ಯುರಿಟಿ ಸಿಬ್ಬಂದಿ ತಿಳಿಸಿದ್ದಾರೆ.


