ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ದಟ್ಟ ಮಂಜು ಕವಿದಿದೆ. ಇದರಿಂದಾಗಿ ಗೋಚರತೆ ತೀವ್ರವಾಗಿ ಕುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬೆಳಿಗ್ಗೆ 5:30 ರ ಸುಮಾರಿಗೆ ಹಲವು ನಗರಗಳಲ್ಲಿ ಶೂನ್ಯ ಗೋಚರತೆ ದಾಖಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಿಗ್ಗೆ 4 ಗಂಟೆಯಿಂದಲೇ ಗೋಚರತೆ ಕಡಿಮೆಯಾಗಿತ್ತು. ಇಂದು ಬೆಳಿಗ್ಗೆ 6 ಗಂಟೆಗೆ, ದೆಹಲಿಯ ಪಾಲಂ ಪ್ರದೇಶದಲ್ಲಿ 800 ಮೀಟರ್ ದೃಷ್ಟಿಮಿತಿ ಇದ್ದರೆ, ಸಫ್ತರ್‌ಜಂಗ್‌ನಲ್ಲಿ 700 ಮೀಟರ್‌ಗೆ ಕುಸಿದಿತ್ತು. ದೆಹಲಿಯಲ್ಲಿ ಕನಿಷ್ಠ ತಾಪಮಾನ 4.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು.
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಾರ, ಕಡಿಮೆ ದೃಷ್ಟಿಮಿತಿಯಿಂದಾಗಿ ವಿಮಾನಗಳ ಕಾರ್ಯಾಚರಣೆ CAT III ಪರಿಸ್ಥಿತಿಗಳಲ್ಲಿ ನಡೆಯುತ್ತಿದೆ. ಇದರಿಂದ ವಿಮಾನಗಳ ಸಂಚಾರದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಪ್ರಯಾಣಿಕರಿಗೆ ಸಲಹೆ ನೀಡಿದ ವಿಮಾನ ನಿಲ್ದಾಣದ ಅಧಿಕಾರಿಗಳು, ತಮ್ಮ ವಿಮಾನಗಳ ಇತ್ತೀಚಿನ ಮಾಹಿತಿಗಾಗಿ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಿದ್ದಾರೆ. ಎಲ್ಲಾ ಟರ್ಮಿನಲ್‌ಗಳಲ್ಲಿ ಅಧಿಕಾರಿಗಳು ಅಗತ್ಯ ಸಹಾಯಕ್ಕೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.


