ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಂದಿನ ಚುನಾವಣೆಗಳ ಕುರಿತ ಚಟುವಟಿಕೆಗಳು ಜೋರಾಗುತ್ತಿರುವ ನಡುವೆ, ಬಿಜೆಪಿ–ಜೆಡಿಎಸ್ ಮೈತ್ರಿ ವಿಚಾರ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳು ಒಟ್ಟಾಗಿ ಹೋಗುತ್ತವೆಯೇ ಎಂಬ ಕುತೂಹಲಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ದೆಹಲಿಯಲ್ಲೇ ಆಗಲಿದೆ ಎಂದು ಹೇಳಿದ್ದಾರೆ.
ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಹಲವು ವರ್ಷಗಳಿಂದ ನಡೆದಿಲ್ಲ ಎಂಬುದನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಈಗ ಚುನಾವಣೆ ಅನಿವಾರ್ಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಲ್ಲಿ ವಿಫಲವಾಗಿದ್ದು, ಜನರ ತಿರಸ್ಕಾರ ಭಯದಿಂದಲೇ ಚುನಾವಣೆಗೆ ಹಿಂದೇಟು ಹಾಕಿತ್ತು ಎಂಬ ಆರೋಪವನ್ನೂ ನಿಖಿಲ್ ಮಾಡಿದರು. ಜಿಬಿಎ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ಕುರಿತು ಪಕ್ಷದೊಳಗೆ ಚರ್ಚೆ ನಡೆದಿದೆ. ಜೊತೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹೊಸ ನಾಯಕತ್ವಕ್ಕೆ ಅವಕಾಶ ನೀಡುವ ವೇದಿಕೆಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ–ಜೆಡಿಎಸ್ ಒಟ್ಟಾಗಿ ಚುನಾವಣೆಗೆ ಹೋಗಬೇಕೇ ಎಂಬ ನಿರ್ಧಾರವನ್ನು ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕತ್ವ ಒಟ್ಟಾಗಿ ದೆಹಲಿಯಲ್ಲಿ ಚರ್ಚಿಸಿ ಕೈಗೊಳ್ಳಲಿದ್ದಾರೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ದೊರೆತ ಯಶಸ್ಸನ್ನು ಉಲ್ಲೇಖಿಸಿದ ಅವರು, ಜೆಡಿಎಸ್ ಎನ್‌ಡಿಎ ಮಿತ್ರ ಕೂಟದ ಭಾಗವಾಗಿ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.


