ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್ ಗೆ ಸ್ಪೆಷಲ್ ಟ್ರೀಟ್ಮೆಂಟ್ ನೀಡಿರುವುದು ಸಾಬೀತಾಗಿದೆ. ಇದು ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಅದರಂತೆ ದರ್ಶನ್ ಬೇರೆ ಜೈಲಿಗೆ ವರ್ಗಾವಣೆಯಾಗುವುದು ಖಚಿತವಾಗಿದೆ. ಅವರನ್ನು ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲು ನ್ಯಾಯಾಲಯ ಅನುಮತಿ ನೀಡಿದೆ. ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ.
ದರ್ಶನ್ ಮಾತ್ರವಲ್ಲ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳೆಲ್ಲ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಆಗಲಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನ್ಯಾಯಾಲಯದ ಆದೇಶವಿದೆ. ಆದೇಶ ಬಂದ ನಂತರ ಎಲ್ಲ ಆರೋಪಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ದರ್ಶನ್ ಶಿಫ್ಟ್ ಆಗುತ್ತಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗುವ ವ್ಯವಸ್ಥೆ ಇದೆ.
ದರ್ಶನ್ ಬಳ್ಳಾರಿ ಜೈಲಿಗೆ, ಪವನ್, ರಾಘವೇಂದ್ರ ಮತ್ತು ನಂದೀಶ್ ಮೈಸೂರು ಜೈಲಿಗೆ ಶಿಫ್ಟ್ ಆಗಿದ್ದಾರೆ. ಜಗದೀಶ್ ಅವರನ್ನು ಶಿವಮೊಗ್ಗ ಜೈಲಿಗೆ, ಧನರಾಜ್ ಅವರನ್ನು ಧಾರವಾಡ ಜೈಲಿಗೆ ಕಳುಹಿಸಲಾಗಿದೆ. ವಿನಯ್ ಅವರನ್ನು ವಿಜಯಪುರ ಜೈಲಿಗೆ ಸ್ಥಳಾಂತರಿಸಲಾಗಿದೆ. ನಾಗರಾಜ್ ಕಲಬರಗಿ ಜೈಲಿಗೆ, ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಿದ್ದಾರೆ.
ಉಳಿದ ಆರೋಪಿಗಳಾದ ಪವಿತ್ರ ಗೌಡ, ಅನುಕುಮಾರ್ ಮತ್ತು ದೀಪಕ್ ಪರಪ್ಪನ ಅಗ್ರಹಾರದಲ್ಲಿಯೇ ಮುಂದುವರಿಯಲಿದ್ದಾರೆ.