ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ಪಕ್ಷ ನಿರ್ಣಾಮ ಆಗ್ತಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಗರಂ ಆಗಿದ್ದು, ಜೆಡಿಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ಕೊಡೋದು ಬೇಡ. ಜೆಡಿಎಸ್ ಉಳಿಯುತ್ತೋ? ನಾಶ ಆಗುತ್ತೋ ಅಂತ ನಾಡಿನ ಜನ ಸರ್ಟಿಫಿಕೇಟ್ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ಬೇಕಿಲ್ಲ. ಲೀಸ್ ಬೇಸ್ ಸಿಎಂ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಅವರಪ್ಪನನ್ನ ಕೇಳೋಕೆ ಹೇಳಿ. ಕಾಂಗ್ರೆಸ್ ಪಕ್ಷದಲ್ಲಿ ಇರೋ ಮಂತ್ರಿಗಳು ಎಷ್ಟು ಜನರನ್ನು ಜೆಡಿಎಸ್‌ನಿಂದ ಲೀಸ್ ಮೇಲೆ ಪಡೆದ್ರಿ. ಸಿಎಂರಿಂದ ಹಿಡಿದು ಎಷ್ಟು ಜನ ಮಂತ್ರಿಗಳನ್ನ ಲೀಸ್ ಬೇಸ್ ಮೇಲೆ ನಿಮ್ಮ ಪಾರ್ಟಿಗೆ ತಗೊಂಡಿದ್ದೀರಾ. ಎಷ್ಟು ಜನ ಮಂತ್ರಿ ಮಾಡಿಕೊಂಡಿದ್ದೀರಾ ಎಂದು ಕಿಡಿಕಾರಿದ್ದಾರೆ.
ನಿಮ್ಮ ಪಕ್ಷದಲ್ಲಿ ಒಂದು ಕಡೆ ಒಬ್ಬರ ಲೀಸ್ ಅವಧಿ ಮುಗಿದು ಹೋಗಿದೆ ನನ್ನನ್ನ ಸಿಎಂ ಮಾಡಿ ಅಂತಾರೆ. ಇನ್ನೊಬ್ಬರು ಲೀಸ್ ಅವಧಿ ಮುಗಿದಿಲ್ಲ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಅಂತಾರೆ. ಮೊದಲು ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಏನ್ ಅಭಿವೃದ್ಧಿ ಮಾಡಿದ್ದೀರಾ ಅಂತ ಜನ ನಿಮಗೆ ಅಧಿಕಾರ ಕೊಡ್ತಾರೆ. ಅವರ ತಂದೆ ಹಿರಿಯ ಖರ್ಗೆ ಮೊನ್ನೆ ಸಮಾವೇಶದಲ್ಲಿ ಏನ್ ಮಾತಾಡಿದ್ರು. ನಿಮ್ಮ ತಂದೆ 40 ವರ್ಷ ಮಾಡಿದ್ದು ಏನು? ಪ್ರಿಯಾಂಕ್ ಖರ್ಗೆ 9 ವರ್ಷ ಮಂತ್ರಿ ಆಗಿದ್ದರು ನೀವು ಮಾಡಿದ್ದು ಏನಪ್ಪ? ಅದಕ್ಕೆ ನಿಮಗೆ 200 ಸೀಟು ಕೊಡ್ತಾರಾ? ಮುಂದೆ ಅಧಿಕಾರ ಕೊಡ್ತಾರಾ? ನನ್ನ ಪಕ್ಷ ನಾಶ ಆಗಿದೆಯೋ? ಉಳಿದಿದೆಯೋ ಜನ ತೀರ್ಮಾನ ಮಾಡ್ತಾರೆ. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬರ್ತೀರಾ ಅಂತ ಕೂತು ಯೋಚನೆ ಮಾಡಿ ಎಂದು ತಿಳಿಸಿದ್ದಾರೆ.


