ಹೊಸ ದಿಗಂತ ವರದಿ, ಚಿಕ್ಕೋಡಿ
ಚಿಕ್ಕೋಡಿ ತಾಲ್ಲೂಕಿನ ಹೊಸದಿಗಂತ ದಿನಪತ್ರಿಕೆಯ ವರದಿಗಾರರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಮಲಾ ಸಿ ಚಿನಕೇಕರ ಅವರು “2025ನೇ ಸಾಲಿನ ಉತ್ತಮ ಪತ್ರಕರ್ತೆ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ.
ಬೆಳಗಾವಿ ನಗರದ ಸಾರ್ವಜನಿಕ ಗ್ರಂಥಾಲಯ ಪ್ರತಿವರ್ಷ ಕನ್ನಡ ಮತ್ತು ಮರಾಠಿ ಭಾಷೆಯ ಪತ್ರಕರ್ತರ ಸಾಧನೆ ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, 2025ನೇ ವರ್ಷದ “ಪ್ರೋ ಎಸ್ ಆರ್ ಜೋಗ್ ಉತ್ತಮ ಮಹಿಳಾ ಕನ್ನಡ ಪತ್ರಕರ್ತೆ ಪ್ರಶಸ್ತಿಯು” ವಿಮಲಾ ಚಿನಕೇಕರ ಅವರಿಗೆ ಒಲಿದು ಬಂದಿದೆ.
ವಿಮಲಾ ಚಿನಕೇಕರ ಅವರು ಚಿಕ್ಕೋಡಿ ತಾಲ್ಲೂಕಿನ 15 ಗ್ರಾಮ ಪಂಚಾಯತಿಗಳನ್ನು ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು ಸೇರಿದಂತೆ ಇವರ ಸಮಾಜಸೇವೆ ಗುರುತಿಸಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ 2018 ಮತ್ತು 2019ರಲ್ಲಿ ಪ್ರತ್ಯೇಕವಾಗಿ ಎರಡು ಬಾರಿ ಇಂಟರನ್ಯಾಷನಲ್ ಬೆಸ್ಟ್ ಲೀಡರ್ ಅವಾರ್ಡ್ ನೀಡಿ ಗೌರವಿಸಿದೆ. ಅಲ್ಲದೇ 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸ್ವೀಪ್ ಐಕಾನ್ ಆಗಿಯೂ ಕಾರ್ಯನಿರ್ವಹಿಸಿ ಮತದಾನ ಜಾಗೃತಿ ಮೂಡಿಸಿದ್ದಾರೆ. ವಿಮಲಾ ಅವರಿಗೆ ಹತ್ತು ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ, ಬಿರುದು ನೀಡಿ ಸನ್ಮಾನಿಸಿ ಗೌರವಿಸಿವೆ.
ಇದೀಗ “ಉತ್ತಮ ಪತ್ರಕರ್ತೆ ಪ್ರಶಸ್ತಿ”ಗೆ ಆಯ್ಕೆಯಾಗಿದ್ದು ಹೊಸದಿಗಂತ ಪತ್ರಿಕೆಯ ಹೆಮ್ಮೆಯಾಗಿದ್ದು, ಪ್ರಶಸ್ತಿಯು ನಗದು ಮೊತ್ತ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಜ.18ರಂದು ಸಂಜೆ 5.30ಕ್ಕೆ ಬೆಳಗಾವಿ ನಗರದ ಗೋವಾವೇಸ್ ನ ಖಾನಾಪೂರ ರಸ್ತೆಯಲ್ಲಿರುವ ಮರಾಠಾ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


