ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗಾಗಿ ಕಾತರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಜನವರಿ 17 ಮತ್ತು 18ರಂದು ಎರಡು ದಿನಗಳ ವಿಶೇಷ ಕಾರ್ಯಕ್ರಮವಾಗಿ ಫಿನಾಲೆ ಪ್ರಸಾರವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ಬಾರಿ ಫಿನಾಲೆ ಕೇವಲ ಒಂದೇ ದಿನ, ಭಾನುವಾರ ನಡೆಯಲಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಕನ್ನಡ ಫಿನಾಲೆ ಎರಡು ದಿನಗಳ ಸಂಭ್ರಮವಾಗಿ ನಡೆಯುತ್ತಿತ್ತು. ಫೈನಲಿಸ್ಟ್‌ಗಳ ವಿಶೇಷ ಪ್ರದರ್ಶನ, ಹಳೆಯ ಸ್ಪರ್ಧಿಗಳ ಮರುಪ್ರವೇಶ, ಅತಿಥಿ ಕಲಾವಿದರ ಭಾಗವಹಿಸುವಿಕೆ ಇದು ಎರಡು ದಿನಗಳ ಆಕರ್ಷಣೆಯಾಗಿತ್ತು. ಆದರೆ ಈ ಬಾರಿ ಆ ಮಾದರಿಯಲ್ಲಿ ಬದಲಾವಣೆ ಆಗಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಫಿನಾಲೆ ಒಂದೇ ದಿನ ಯಾಕೆ?”, “ಕಿಚ್ಚ ಸುದೀಪ್ ಲಭ್ಯವಿಲ್ಲವೇ?” ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ.
ಈ ಬದಲಾವಣೆಗೆ ಪ್ರಮುಖ ಕಾರಣ ನಿರೂಪಕ ಕಿಚ್ಚ ಸುದೀಪ್ ಅವರ ಬ್ಯುಸಿ ವೇಳಾಪಟ್ಟಿ ಎಂದು ಹೇಳಲಾಗುತ್ತಿದೆ. ಸುದೀಪ್ ಅವರು ಸಿಸಿಎಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಐಕಾನ್ ಆಗಿದ್ದು, ಜನವರಿ 16ರಂದು ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದರು. ಪಂದ್ಯ ಮುಗಿದ ಬಳಿಕ ತಕ್ಷಣ ಬೆಂಗಳೂರಿಗೆ ಮರಳಿ ಫಿನಾಲೆ ನಿರ್ವಹಿಸುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ, ಫಿನಾಲೆಯನ್ನು ಒಂದೇ ದಿನಕ್ಕೆ ಸೀಮಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನೊಂದೆಡೆ, ಇಂದು ರಾತ್ರಿ ಎಂದಿನಂತೆ ಸಾಮಾನ್ಯ ಎಪಿಸೋಡ್ ಪ್ರಸಾರವಾಗಲಿದ್ದು, ಪ್ರೀ-ಫಿನಾಲೆಯಲ್ಲಿ ಒಬ್ಬ ಸ್ಪರ್ಧಿ ಹೊರಬೀಳುವ ಸಾಧ್ಯತೆ ಇದೆ. ವಿನ್ನರ್ ಹಾಗೂ ರನ್ನರ್‌ಅಪ್ ಘೋಷಣೆ ಭಾನುವಾರವೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.


