ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ.1 ರಂದು ಬಳ್ಳಾರಿಯಲ್ಲಿನ ಶಾಸಕ ಜನಾರ್ಧನರೆಡ್ಡಿ ಮನೆ ಬಳಿ ನಡೆದ ಫೈರಿಂಗ್ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಶಾಸಕ ಭರತ್ ರೆಡ್ಡಿ ಮತ್ತವರ ಆಪ್ತ ಸತೀಶ್ ರೆಡ್ಡಿ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಬಳ್ಳಾರಿಯಲ್ಲಿಂದು ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸುವ ಮೂಲಕ ಬಲ ಪ್ರದರ್ಶನ ನಡೆಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗಲೇ ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಿದ್ದು. ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಮೀಸಲಾತಿ ಹೆಚ್ಚಳ ಮಾಡಿದ್ದು ಕೂಡಾ ಬಿಜೆಪಿ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ವಾಲ್ಮೀಕಿ ಸಮುದಾಯಕ್ಕೆ ನಿಮ್ಮ ಸರ್ಕಾರದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ವಿರೋಧಿಯಾಗಿದೆ. ರಾಜ್ಯದಲ್ಲಿನ ಪೊಲೀಸ್ ವ್ಯವಸ್ಥ ಕುಸಿದಿದೆ. ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ ಎಂದು ಆರೋಪಿಸಿದ ವಿಜಯೇಂದ್ರ, ಬಳ್ಳಾರಿ ಘಟನೆ ಖಂಡಿಸಿ ಶ್ರೀ ರಾಮುಲು ಮತ್ತು ಜನಾರ್ಧನರೆಡ್ಡಿ ಅವರು ಬಳ್ಳಾರಿಯಿಂದ ಬೆಂಗಳೂರಿಗೆಪಾದಯಾತ್ರೆ ಮಾಡಲು ಬಯಸಿದ್ದಾರೆ. ಈ ವಿಷಯವನ್ನು ಕೇಂದ್ರದ ನಾಯಕರಿಗೆ ತಿಳಿಸಿ ಮುಂದಿನ ದಿನದಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಗೃಹ ಇಲಾಖೆ ಸಚಿವರು ಕೇವಲ ವಿಧಾನ ಸಭೆಯಲ್ಲಿ ಉತ್ತರ ನೀಡಲು ಮಾತ್ರ ಇದ್ದಾರೆ. ಅವರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗುಂಡು ಹಾರಿಸಿದ್ದು ಕಾಂಗ್ರೆಸ್ ನವರೆಂದು ಅವರ ಕಡೆಯವರ ಬಂಧನ ಇಲ್ಲ. ಅದೇನಾದ್ರೂ ಬಿಜೆಪಿಯವರ ಕಡೆಯಿಂದ ಆಗಿದ್ದರೆ ಈ ವೇಳೆಗೆ ನೂರಾರು ಜನರ ಬಂಧನವಾಗುತ್ತಿತ್ತು. ಕಾಂಗ್ರೆಸ್ ನಿಂದ ನಮಗ ನ್ಯಾಯದ ನಿರೀಕ್ಷೆ ಇಲ್ಲ. ಪೊಲೀಸರೂ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಬಳ್ಳಾರಿಯಲ್ಲಿ ಅಭಿವೃದ್ಧಿ ಇಲ್ಲ. ಬಳ್ಳಾರಿಯನ್ನೇ ಸುಡುತ್ತೇನೆ ಎಂದ ಶಾಸಕನಿಗೆ ಡಿಸಿಎಂ ಡಿಕೆಶಿ ಪೂರ್ತಿ ಬೆಂಬಲ ಎನ್ನುತ್ತಾರೆ. ಇಂತಹವರಿಗೆ ಸರಿಯಾದ ಬುದ್ದಿ ಕಲಿಸಿ ಎಂದರು.


