ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರವೂ ಕರ್ನಾಟಕಕ್ಕೆ ಬಂಡವಾಳ ಹರಿದಿದ್ದು, ಕಳೆದ 11 ತಿಂಗಳ ಅವಧಿಯಲ್ಲಿ ರಾಜ್ಯವು ₹1.53 ಲಕ್ಷ ಕೋಟಿ ಮೊತ್ತದ ಹೊಸ ಕೈಗಾರಿಕಾ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್ ಆರ್ಥಿಕ ಶೃಂಗಸಭೆಗೆ ತೆರಳುವ ಮುನ್ನ ಮಾತನಾಡಿದ ಅವರು, ಹೂಡಿಕೆ ಆಕರ್ಷಣೆ ಕೇವಲ ಸಮಾವೇಶಗಳಿಗೆ ಸೀಮಿತವಾಗಿಲ್ಲ, ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು. ತಯಾರಿಕೆ, ನವೀಕರಿಸಬಹುದಾದ ಇಂಧನ, ಡೇಟಾ ಸೆಂಟರ್‌ಗಳು ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳಂತಹ ವಲಯಗಳಲ್ಲಿ ಅಗ್ರಗಣ್ಯ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿವೆ ಎಂದು ಮಾಹಿತಿ ನೀಡಿದರು.
ಅಂಕಿಅಂಶಗಳ ಪ್ರಕಾರ, ತಯಾರಿಕೆ ವಲಯದಲ್ಲಿ ₹66,293 ಕೋಟಿ, ಪವನ ಹಾಗೂ ಸೌರ ವಿದ್ಯುತ್ ಕ್ಷೇತ್ರದಲ್ಲಿ ₹20,913 ಕೋಟಿ, ಜಿಸಿಸಿ ಸ್ಥಾಪನೆಗೆ ₹12,500 ಕೋಟಿ ಮತ್ತು ಡೇಟಾ ಸೆಂಟರ್‌ಗಳಿಗೆ ₹6,350 ಕೋಟಿ ಹೂಡಿಕೆ ಬರಲಿದೆ. ಈ ಪ್ರಸ್ತಾವನೆಗಳು ಶೀಘ್ರದಲ್ಲೇ ‘ಕರ್ನಾಟಕ ಉದ್ಯೋಗ ಮಿತ್ರ’ ಮೂಲಕ ಮುಂದಿನ ಹಂತಕ್ಕೆ ಸಾಗಲಿವೆ ಎಂದು ಪಾಟೀಲ್ ಹೇಳಿದರು.
ಟೊಯೋಟಾ, ಗೂಗಲ್, ಎಸ್ಎಪಿ, ಎನ್‌ಟಿಟಿ, ಕ್ಯೂಪೈಎಐ, ವಿಪ್ರೋ ಹೈಡ್ರಾಲಿಕ್ಸ್ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಜಾಗತಿಕ ಕಂಪನಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ಘಟಕ ಸ್ಥಾಪನೆಗೆ ಬಂಡವಾಳ ಹೂಡುತ್ತಿವೆ. ಇದರಿಂದ ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.


