ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಅದೆಷ್ಟು ಗುಂಡಿಗಳಿದ್ಯೋ ಸರ್ಕಾರಕ್ಕೇ ಗೊತ್ತು! ಗುಂಡಿಗೆ ಬಿದ್ದು ಸಾಯುವವರು, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವವರ ಗೋಳು ಕೇಳುವಂತಿಲ್ಲ.
ಟೆಕ್ಕಿಯೊಬ್ಬರು ಮಾಮೂಲಿ ದಿನದಂದು ಆಫೀಸ್ ಮುಗಿಸಿ ಮನೆಗೆ ಹೋಗುವಾಗ ಬೆಂಗಳೂರಿನ ರಸ್ತೆ ಗುಂಡಿಗೆ ಗಾಡಿ ಇಳಿಸಿ ಬಿದ್ದಿದ್ದು, ಭುಜದ ಮೂಳೆಯೇ ಮುರಿದುಹೋಗಿದೆ.
ಐಟಿ ಉದ್ಯೋಗಿ ಶ್ರೀಧರ್ ಬಲ ಭುಜದ ಮೂಳೆ ಮುರಿದಿದ್ದು, ಇದರಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಶ್ರೀಧರ್ ಹೊರ ವರ್ತುಲ ರಸ್ತೆಯಲ್ಲಿರುವ ಬಹುರಾಷ್ಟ್ರೀಯ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನವರಿ 12ರ ಸೋಮವಾರ ಸಂಜೆ ಕಚೇರಿಯಿಂದ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪಣತ್ತೂರು-ದಿಣ್ಣೆ ಗುಂಜೂರು ಪಾಳ್ಯ ರಸ್ತೆಯ ಸಿಡಿಪಿ ರಸ್ತೆ ಬಳಿ ಸ್ಕೂಟರ್ ಚಲಾಯಿಸುತ್ತಿದ್ದಾಗ, ದೊಡ್ಡ ಹೊಂಡವೊಂದಕ್ಕೆ ಸ್ಕೂಟರ್ ಇಳಿದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆ ಬದಿಯಲ್ಲಿದ್ದ ಮಣ್ಣು ಮತ್ತು ಕಸದ ರಾಶಿಗೆ ನುಗ್ಗಿದ್ದು, ಶ್ರೀಧರ್ ರಸ್ತೆ ಮೇಲೆ ಜೋರಾಗಿ ಬಿದ್ದಿದ್ದಾರೆ.
ಕೆಲ ನಿಮಿಷ ಪ್ರಜ್ಞೆ ಕಳೆದುಕೊಂಡಿದ್ದ ಅವರಿಗೆ, ದಾರಿಹೋಕರು ನೀರು ಕೊಟ್ಟು ಉಪಚರಿಸಿ ಸಹಾಯ ಮಾಡಿದ್ದಾರೆ. ಆದರೆ, ಮನೆಗೆ ತಲುಪಿದ ಮೇಲೆ ಬಲ ಭುಜದಲ್ಲಿ ವಿಪರೀತ ಊತ ಕಾಣಿಸಿಕೊಂಡಿದೆ. ವೈದ್ಯರ ಸಲಹೆಯಂತೆ ಎಕ್ಸ್-ರೇ ಮತ್ತು ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಆಘಾತಕಾರಿ ಸಂಗತಿ ತಿಳಿದುಬಂದಿದೆ.
ಅವರ ಬಲ ಭುಜದ ಮೇಲ್ಭಾಗದಲ್ಲಿ ಮೂಳೆ ಮುರಿತವಾಗಿದ್ದು,. ಇದಕ್ಕೆ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಸುಮಾರು 1.25 ರಿಂದ 1.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಶ್ರೀಧರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಸಂಪೂರ್ಣ ಗುಣಮುಖನಾಗಲು ಕನಿಷ್ಠ ಎರಡು ತಿಂಗಳು ಬೇಕು. ಮತ್ತೆ ಗಾಡಿ ಓಡಿಸಲು ಇನ್ನೆರಡು ತಿಂಗಳು ಬೇಕಾಗಬಹುದು. ಪ್ರತಿದಿನ ಮಗಳನ್ನು ಶಾಲೆಗೆ ಬಿಡುವುದು, ಹೆಂಡತಿಗೆ ಸಹಾಯ ಮಾಡುವುದು ಎಲ್ಲವೂ ನಿಂತುಹೋಗಿದೆ. ಆಫೀಸ್ ಕೆಲಸಕ್ಕೂ ತೊಂದರೆಯಾಗಿದೆ. ಕೇವಲ ಒಂದು ಗುಂಡಿಯಿಂದ ನನ್ನ ಇಡೀ ಕುಟುಂಬ ನಾಲ್ಕು ತಿಂಗಳು ಪರದಾಡುವಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಈ ರಸ್ತೆಗಳಲ್ಲಿನ ಗುಂಡಿಗಳು ಪ್ರಾಣಕ್ಕೆ ಕುತ್ತು ತರುತ್ತಿವೆ. ಅದೃಷ್ಟವಶಾತ್ ನಾನು ಬದುಕುಳಿದಿದ್ದೇನೆ, ಆದರೆ ಎಲ್ಲರಿಗೂ ಹೀಗಾಗುವುದಿಲ್ಲ. ದಯವಿಟ್ಟು ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪಣತ್ತೂರು ಮತ್ತು ಸಿಡಿಪಿ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಎಂದು ಮನವಿ ಮಾಡಿದ್ದಾರೆ.


