ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಪೊಲೀಸ್ ಮೈಸೂರಿನ ಡ್ರಗ್ಸ್ ಫ್ಯಾಕ್ಟರಿ ಹುಡ್ಕಿದಾರೆ, ನೀವೇನ್ ಮಾಡ್ತಿದಿರಾ? ಎಂದು ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಗುರುತರವಾದ ಕಾರ್ಯವನ್ನು ರಾಜ್ಯದ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಮಾಡುತ್ತಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವುದು, ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಪೂರಕವಾಗಿ ಕೆಲಸ ಮಾಡಬೇಕು. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ರಕ್ಷಣೆಯನ್ನು ಒದಗಿಸಿದೆ. ಕಾನೂನು ಎಲ್ಲರಿಗೂ ಒಂದೇ. ಯಾರು ತಪ್ಪು ಮಾಡಿದರೂ ಅದು ತಪ್ಪೇ. ಬಲಾಢ್ಯರು, ಸಮಾಜ ಘಾತುಕ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ದುರ್ಬಲರು, ಪರಿಶಿಷ್ಟ ಜಾತಿ, ವರ್ಗದ ಜನರು, ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಎಲ್ಲರ ಹೊಣೆ. ದುರ್ಬಲರು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು. ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದಿದ್ದಾರೆ.
ತಹಶೀಲ್ದಾರ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ತಾಲೂಕಿನಲ್ಲಿ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಇದೇ ರೀತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಒ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ಜಿಲ್ಲೆಯ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ಕೆಲವು ಪೊಲೀಸ್ ಠಾಣೆಗಳಲ್ಲಿ ಕೆಲವು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣಕ್ಕೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಕೊಲೆ, ಸುಲಿಗೆ, ಢಕಾಯಿತಿ, ದರೋಡೆ ಪ್ರಕರಣಗಳು ಕಳೆದ ಒಂದು ವರ್ಷದಲ್ಲಿ ಕಡಿಮೆಯಾಗಿದೆ. ಆದರೆ ಸೈಬರ್ ಅಪರಾಧ, ಡ್ರಗ್ಸ್ ಚಟುವಟಿಕೆಗಳು ಹೆಚ್ಚಾಗಿದ್ದು, ಅದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಬೇಕು. ನಮ್ಮ ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಕನ್ವಿಕ್ಷನ್ ದರ ಕಡಿಮೆಯಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯನ್ನು ಖಾತ್ರಿಪಡಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕನ್ವಿಕ್ಷನ್ ಪ್ರಮಾಣ ಕಳೆದ ವರ್ಷ ಶೇ.3ರಷ್ಟಿತ್ತು ಈಗ ಶೇ.12ಕ್ಕೆ ಸುಧಾರಿಸಿದ್ದು, ಇದನ್ನು ಇನ್ನಷ್ಟು ಉತ್ತಮಪಡಿಸಬೇಕಿದೆ ಎಂದಿದ್ದಾರೆ.


