ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸದ್ಯ ಕಲುಷಿತ ನೀರಿನ ಭೀತಿ ಆವರಿಸಿದೆ. ಇತ್ತೀಚೆಗಷ್ಟೇ ಕಲುಷಿತ ನೀರು ಸೇವಿಸಿ ಸುಮಾರು 23 ಮಂದಿ ಸಾವನ್ನಪ್ಪಿ, ನೂರಾರು ಜನ ಆಸ್ಪತ್ರೆ ಸೇರಿರುವ ಘಟನೆ ಕ್ರೀಡಾ ಲೋಕದಲ್ಲೂ ಸಂಚಲನ ಮೂಡಿಸಿದೆ. ಈ ದುರಂತದ ಬೆನ್ನಲ್ಲೇ, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕಾಗಿ ಇಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಟಗಾರರು ಭಾರೀ ಮುನ್ನೆಚ್ಚರಿಕೆ ವಹಿಸಿದ್ದಾರೆ.
ತಂಡದ ನಾಯಕ ಶುಭಮನ್ ಗಿಲ್ ತಮ್ಮ ಆರೋಗ್ಯದ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ವರದಿಗಳ ಪ್ರಕಾರ, ಗಿಲ್ ತಾವು ತಂಗಿರುವ ಪಂಚತಾರಾ ಹೋಟೆಲ್‌ನ ಕೊಠಡಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ನೀರು ಶುದ್ಧೀಕರಣ ಯಂತ್ರವನ್ನು ತರಿಸಿಕೊಂಡಿದ್ದಾರೆ. ಈಗಾಗಲೇ ಸಂಸ್ಕರಿಸಿದ ಮತ್ತು ಬಾಟಲ್ ನೀರನ್ನೇ ಮತ್ತೊಮ್ಮೆ ಶುದ್ಧೀಕರಿಸುವ ಸಾಮರ್ಥ್ಯ ಈ ಯಂತ್ರಕ್ಕಿದೆ ಎನ್ನಲಾಗಿದೆ.
ಭಾನುವಾರ (ಜ.18) ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ನಡೆಯಲಿದ್ದು, ಆಟಗಾರರು ಅನಾರೋಗ್ಯಕ್ಕೆ ತುತ್ತಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಟೀಂ ಇಂಡಿಯಾದ ಮಾಧ್ಯಮ ವ್ಯವಸ್ಥಾಪಕರು ನಿರಾಕರಿಸಿದ್ದು, ಇದು ವೈಯಕ್ತಿಕ ಮುನ್ನೆಚ್ಚರಿಕೆಯೇ ಅಥವಾ ತಂಡದ ಅಧಿಕೃತ ಪ್ರೋಟೋಕಾಲ್ ಭಾಗವೇ ಎಂಬುದು ಕುತೂಹಲ ಮೂಡಿಸಿದೆ.


