ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯ ನಂಜೇದೇವನಪುರ ಸುತ್ತಮುತ್ತ ತಾಯಿ ಹುಲಿ ಹಾಗೂ ಅದರ ಮರಿಗಳು ಕಾಣಿಸಿಕೊಂಡಿದ್ದ ಪ್ರಕರಣದಲ್ಲಿ ಅರಣ್ಯ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಕಾರ್ಯಾಚರಣೆ ವೇಳೆ ಒಂದು ಗಂಡು ಹುಲಿ ಮರಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಅರಣ್ಯಾಧಿಕಾರಿಗಳು ಸಾಕಾನೆಗಳ ಸಹಾಯದಿಂದ ಶೋಧ ಕಾರ್ಯ ನಡೆಸಿ, ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಹುಲಿ ಮರಿಯನ್ನು ಹಿಡಿದಿದ್ದಾರೆ. ಇದಕ್ಕೂ ಮೊದಲು ತಾಯಿ ಹುಲಿ ಹಾಗೂ ಒಂದು ಹೆಣ್ಣು ಮರಿ ಸೆರೆಸಿಕ್ಕಿದ್ದವು. ಇದೀಗ ಮತ್ತೊಂದು ಮರಿ ಹಿಡಿಯಲ್ಪಟ್ಟಿರುವುದರಿಂದ ಸ್ಥಳೀಯರಲ್ಲಿ ಸ್ವಲ್ಪ ಮಟ್ಟಿನ ನಿಟ್ಟುಸಿರು ಮೂಡಿದೆ.
ಆದರೂ ಅಪಾಯ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಉಳಿದ ಎರಡು ಹುಲಿ ಮರಿಗಳು ಆನೆಮಡುವಿನ ಕೆರೆಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಉಳಿದ ಮರಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ.


