ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸಂಸದ ಹಾಗೂ ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ನಡೆದ ಕಳ್ಳತನ ಪ್ರಕರಣ ಇದೀಗ ಬಹಿರಂಗವಾಗಿದೆ. ಅಂಧೇರಿ ಪಶ್ಚಿಮದ ಶಾಸ್ತ್ರಿ ನಗರದಲ್ಲಿರುವ ಸುಂದರ್‌ಬನ್ ಅಪಾರ್ಟ್‌ಮೆಂಟ್‌ನ ಅವರ ಮನೆಯಿಂದ ಒಟ್ಟು 5.40 ಲಕ್ಷ ರೂ. ನಗದು ಕಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮನೋಜ್ ತಿವಾರಿ ಅವರ ಮಾಜಿ ಉದ್ಯೋಗಿಯನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸುರೇಂದ್ರ ಕುಮಾರ್ ದೀನನಾಥ್ ಶರ್ಮಾ ಎಂದು ಗುರುತಿಸಲಾಗಿದ್ದು, ಅವನನ್ನು ಸುಮಾರು ಎರಡು ವರ್ಷಗಳ ಹಿಂದೆ ಕೆಲಸದಿಂದ ವಜಾಗೊಳಿಸಲಾಗಿತ್ತು.
ಪೊಲೀಸರ ತನಿಖೆಯ ಪ್ರಕಾರ, ಮನೆಯೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಮೂಲಕ ಆರೋಪಿಯನ್ನು ಗುರುತಿಸಲಾಗಿದೆ. ನಕಲಿ ಕೀಲಿಗಳನ್ನು ಬಳಸಿ ಮನೆ, ಮಲಗುವ ಕೋಣೆ ಮತ್ತು ಕ್ಲೋಸೆಟ್ ತೆರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 15ರ ರಾತ್ರಿ 9 ಗಂಟೆ ಸುಮಾರಿಗೆ ಕಳ್ಳತನ ನಡೆದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಇದಕ್ಕೂ ಮೊದಲು, ಜೂನ್ 2025ರಲ್ಲಿ 4.40 ಲಕ್ಷ ರೂ. ನಗದು ಕಣ್ಮರೆಯಾಗಿದ್ದರೂ, ಆ ವೇಳೆ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ನಂತರ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಡಿಸೆಂಬರ್‌ನಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಇದೀಗ ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


