ಮಕ್ಕಳನ್ನು ಬೆಳೆಸುವುದು ಪಠ್ಯ ಪುಸ್ತಕದ ನಿಯಮಗಳಂತೆ ನಡೆಯುವ ಪ್ರಕ್ರಿಯೆಯಲ್ಲ. ಪ್ರತಿದಿನವೂ ಹೊಸ ಅನುಭವ, ಹೊಸ ಪಾಠ. ಪೋಷಕರಾಗಿ ನಾವು ಮಕ್ಕಳಿಗೆ ಏನು ಹೇಳುತ್ತೇವೆ ಎನ್ನುವುದಕ್ಕಿಂತ, ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದೇ ಅವರ ಮನಸ್ಸಿನಲ್ಲಿ ಆಳವಾಗಿ ಉಳಿಯುತ್ತದೆ. ಮಕ್ಕಳು ನೀವು ಹೇಳಿದಂತೆ ಕೇಳಬೇಕು ಎನ್ನುವ ಆಸೆ ಎಲ್ಲರಲ್ಲೂ ಸಹಜ. ಆದರೆ ಆ ರೀತಿ ಬಲವಂತದಿಂದ ಮಾಡೋದಲ್ಲ, ಅದು ಸಂಬಂಧದಿಂದ, ನಂಬಿಕೆಯಿಂದ ಮತ್ತು ವರ್ತನೆಯಿಂದ ಮೂಡುತ್ತದೆ. ಅದಕ್ಕಾಗಿ ಪೋಷಕರು ಕೆಲವು ಹಳೆಯ ಅಭ್ಯಾಸಗಳಿಗೆ ಗುಡ್‌ಬೈ ಹೇಳಬೇಕಾಗುತ್ತದೆ.
ನೀವೇ ಪಾಲಿಸದ ನಿಯಮಗಳನ್ನು ಮಕ್ಕಳಿಗೆ ಹೇಳುವುದು:
ಮಕ್ಕಳು ಮಾತಿಗಿಂತ ಕಾರ್ಯವನ್ನು ಹೆಚ್ಚು ಗಮನಿಸುತ್ತಾರೆ. ನೀವು ಬಯಸುವ ನಡವಳಿಕೆಯನ್ನು ಮೊದಲು ನೀವೇ ಅಳವಡಿಸಿಕೊಳ್ಳಬೇಕು.
ಮಕ್ಕಳ ಮಾತು ಕೇಳದೆ ನೀವು ಮಾತಾಡ್ಬೇಡಿ:
ಮಕ್ಕಳು ಏನು ಹೇಳಲು ಬಯಸುತ್ತಿದ್ದಾರೆ ಎಂಬುದನ್ನು ಪೂರ್ಣವಾಗಿ ಕೇಳುವ ಮೊದಲೇ ಬುದ್ಧಿವಾದ ಶುರು ಮಾಡಿದರೆ, ಅವರಿಗೆ ತಮ್ಮ ಮಾತಿಗೆ ಬೆಲೆ ಇಲ್ಲ ಅನ್ನಿಸುವ ಭಾವನೆ ಮೂಡುತ್ತದೆ. ಕೇಳುವುದು ಗೌರವದ ಮೊದಲ ಹೆಜ್ಜೆ.
ನಿಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸಬೇಡಿ:
ಪ್ರತಿ ಮಗು ವಿಭಿನ್ನ. ಹೋಲಿಕೆ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ತಮ್ಮದೇ ಆದ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಿದಾಗ, ಮಕ್ಕಳು ಪೋಷಕರನ್ನು ಅರ್ಥಮಾಡಿಕೊಳ್ಳುತ್ತಾರೆ.
ತಪ್ಪು ಮಾಡಿದಾಗ ಒಪ್ಪಿಕೊಳ್ಳದಿರುವುದು:
ಪೋಷಕರೂ ಸಹ ತಪ್ಪು ಮಾಡುತ್ತಾರೆ. ಅದನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು ದುರ್ಬಲತೆ ಅಲ್ಲ, ಅದು ಪ್ರೌಢಿಮೆ. ಇದು ಮಕ್ಕಳಲ್ಲಿ ನಿಮ್ಮ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ.
ತಪ್ಪುಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವುದು:
ಅತಿಯಾದ ಗದರಿಕೆ ಭಯ ಹುಟ್ಟಿಸುತ್ತದೆ, ಗೌರವವಲ್ಲ. ತಪ್ಪುಗಳನ್ನು ಪಾಠಗಳಾಗಿ ಬಳಸಿದರೆ ಸಂಬಂಧ ಗಟ್ಟಿಯಾಗುತ್ತದೆ.
ಮಕ್ಕಳಿಗೆ ಬೆಳೆಯಲು ಜಾಗ ನೀಡದಿರುವುದು:
ಅತಿಯಾಗಿ ನಿಯಂತ್ರಿಸಿದರೆ ಮಕ್ಕಳು ಪ್ರತಿಯೊಂದು ಕೆಲಸ ಮಾಡಲು ಹಿಂಜರಿಯುತ್ತಾರೆ. ಸ್ವತಂತ್ರವಾಗಿ ಕಲಿಯಲು ಅವಕಾಶ ನೀಡಿದರೆ, ಅವರು ನಿಮ್ಮನ್ನು ನಂಬಲು ಮತ್ತು ಗೌರವಿಸಲು ಕಲಿಯುತ್ತಾರೆ.


