ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟಿಕೆ ಮತ್ತೆ ಆತಂಕ ಮೂಡಿಸಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಅಸಿಸ್ಟೆಂಟ್ ಜೈಲರ್ ಮೇಲೆಯೇ ಕೈದಿಗಳು ದೈಹಿಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಜನವರಿ 7ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಶಿಕ್ಷಾ ಬಂಧಿಗಳ ಕಚೇರಿಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದ ಕೈದಿಗಳನ್ನು ಅಸಿಸ್ಟೆಂಟ್ ಜೈಲರ್ ತಡೆದು, ನಿಯಮ ಪಾಲನೆಗೆ ಸೂಚಿಸಿದ್ದರು. ಇದರಿಂದ ಆಕ್ರೋಶಗೊಂಡ ಇಬ್ಬರೂ ಕೈದಿಗಳು ವಾಗ್ವಾದ ನಡೆಸಿ, ಬಳಿಕ ಅಸಿಸ್ಟೆಂಟ್ ಜೈಲರ್ ಮೇಲೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಜೈಲಿನೊಳಗೆ ಆಂತರಿಕ ವಿಚಾರಣೆ ನಡೆಯುತ್ತಿದ್ದರೂ, ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಶನಿವಾರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ. ಜೈಲಿನ ಪ್ರಭಾರ ಅಧೀಕ್ಷಕರು ದೂರು ಸಲ್ಲಿಸಿದ್ದು, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ.


