ಹೋರಾಟಕ್ಕೆ ಮೊದಲ ಹಂತದ ಜಯ: ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿದ್ದರಾಮಯ್ಯ ಅವರು ರಾಜ್ಯ ಹೈಕೋರ್ಟಿನ ತೀರ್ಪನ್ನು ಗೌರವಿಸಿ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ  ಜಗನ್ನಾಥ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ಮಾನ್ಯ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದಾರೆ. ಕಾನೂನಿನ ಎದುರು ಎಲ್ಲರೂ ಒಂದೇ ಎಂದು ಹೈಕೋರ್ಟ್ ತಿಳಿಸಿದೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು.

ಕಳೆದ ಕೆಲವು ತಿಂಗಳಿನಿಂದ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿದ್ದೆವು. ನಂತರ ಸ್ವತಃ ಸಿಎಂ ಕುಟುಂಬವೇ ಫಲಾನುಭವಿಗಳಾಗಿರುವ ಮೈಸೂರಿನ ಮುಡಾ ಹಗರಣ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೆವು. ಬೆಂಗಳೂರು- ಮೈಸೂರು ಪಾದಯಾತ್ರೆಯನ್ನು ನಡೆಸಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಯಶಸ್ವಿ ಹೋರಾಟ ಮಾಡಿದ್ದಾಗಿ ವಿಜಯೇಂದ್ರ ವಿವರಿಸಿದರು.

ಮುಡಾ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ರಾಜಭವನ, ರಾಜ್ಯಪಾಲರ ವಿರುದ್ಧ ತೇಜೋವಧೆ ಮಾಡಿದ್ದರು. ಈಗ ಹೈಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದ್ದರಿಂದ ಸಿಎಂ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ ಎಂದೂ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಪಕ್ಷದ ಮುಂದಿನ ನಡೆಯ ಕುರಿತು ಪ್ರಮುಖರು, ಹಿರಿಯರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ವಿಜಯೇಂದ್ರ ಉತ್ತರ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!