January18, 2026
Sunday, January 18, 2026
spot_img

ಧಗಧಗನೆ ಹೊತ್ತಿ ಉರಿದ ಕಾರು: ಸಮಯಪ್ರಜ್ಞೆಯಿಂದ ಬದುಕುಳಿದ ಪ್ರಯಾಣಿಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ನೋಡನೋಡುತ್ತಿದ್ದಂತೆಯೇ ಬೆಂಕಿಗಾಹುತಿಯಾದ ಭೀಕರ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ನಗರದ ಯಶವಂತಪುರದಿಂದ ಟಾಟಾ ಇನ್‌ಸ್ಟಿಟ್ಯೂಟ್ ಕಡೆಗೆ ಸಾಗುತ್ತಿದ್ದ ಬಿಳಿ ಬಣ್ಣದ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಳಿಗ್ಗೆ ಸುಮಾರು 7:30ರ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಕಾರು ಪ್ರಯಾಣ ಆರಂಭಿಸಿ ಕೇವಲ ಒಂದು ಕಿಲೋಮೀಟರ್ ಕ್ರಮಿಸುವಷ್ಟರಲ್ಲಿ ಇಂಜಿನ್ ಭಾಗದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಕೂಡಲೇ ಕೆಳಗಿಳಿದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ.

ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಇಡೀ ಕಾರನ್ನು ಜ್ವಾಲೆ ಆವರಿಸಿಕೊಂಡಿತು. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಹೊತ್ತಿಗಾಗಲೇ ಕಾರು ಸಂಪೂರ್ಣವಾಗಿ ಭಸ್ಮವಾಗಿತ್ತು. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಅಥವಾ ಇಂಜಿನ್‌ನಲ್ಲಿನ ತಾಂತ್ರಿಕ ದೋಷವೇ ಈ ಅನಾಹುತಕ್ಕೆ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ಪ್ರಸ್ತುತ ಯಶವಂತಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ನಂತರವಷ್ಟೇ ಬೆಂಕಿ ಅವಾಂತರಕ್ಕೆ ನಿಖರ ಕಾರಣ ತಿಳಿಯಬೇಕಿದೆ.

Must Read

error: Content is protected !!