January18, 2026
Sunday, January 18, 2026
spot_img

ಅಂದು ಆಸಿಸ್ ವಿರುದ್ಧ ಅಬ್ಬರ, ಇಂದು ಕಿವೀಸ್ ವಿರುದ್ಧ ಕಂಗಾಲು: ರೋಹಿತ್ ಫಾರ್ಮ್ ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರಿಗೆ ಹೊಸ ವರ್ಷದ ಆರಂಭ ಆಶಾದಾಯಕವಾಗಿಲ್ಲ. 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇಂದೋರ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಕಿವೀಸ್ ನೀಡಿದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಉತ್ತಮ ಆರಂಭ ನೀಡುವ ಭರವಸೆ ಮೂಡಿಸಿದ್ದರು. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರಾದರೂ, ನಂತರ ಲಯ ಕಂಡುಕೊಳ್ಳಲು ಪರದಾಡಿದರು. ನಾಲ್ಕನೇ ಓವರ್‌ನಲ್ಲಿ ಜೀವದಾನ ಸಿಕ್ಕರೂ ಅದರ ಲಾಭ ಪಡೆಯಲು ವಿಫಲರಾದ ಅವರು, ಕೇವಲ 11 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಈ ಇಡೀ ಸರಣಿಯಲ್ಲಿ ರೋಹಿತ್ ಗಳಿಸಿದ್ದು ಕೇವಲ 61 ರನ್ ಮಾತ್ರ (ಸರಾಸರಿ 20). 2013 ರಲ್ಲಿ ಪೂರ್ಣಾವಧಿ ಆರಂಭಿಕ ಆಟಗಾರನಾದ ನಂತರ, ಕನಿಷ್ಠ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಇದಕ್ಕೂ ಮುನ್ನ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರು ಕೇವಲ 49 ರನ್ ಗಳಿಸಿದ್ದರು. ಆ ಕರಾಳ ದಾಖಲೆಯ ಬಳಿಕ ಅತಿ ಕಡಿಮೆ ರನ್ ಗಳಿಸಿದ ಸರಣಿ ಎಂಬ ಹಣೆಪಟ್ಟಿ ಇದಕ್ಕೆ ಅಂಟಿಕೊಂಡಿದೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ 201 ರನ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿದ್ದ ರೋಹಿತ್, ಕಿವೀಸ್ ಪಡೆಯ ಸ್ಪಿನ್ ಮತ್ತು ವೇಗಕ್ಕೆ ಶರಣಾಗಿದ್ದಾರೆ. ವಡೋದರಾದಲ್ಲಿ 26 ಹಾಗೂ ರಾಜ್‌ಕೋಟ್‌ನಲ್ಲಿ 24 ರನ್ ಗಳಿಸಿದ್ದ ಅವರು, ಸಿಕ್ಕ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಸತತ ಮೂರು ಪಂದ್ಯಗಳಲ್ಲಿ ಎಡವಿದ್ದಾರೆ.

Must Read

error: Content is protected !!