ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆಇಂದು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇತ್ತ ಅನುಮತಿ ದೊರೆಯುತ್ತಿದ್ದಂತೆ ಬಳ್ಳಾರಿಯಲ್ಲಿ ರೆಡ್ಡಿ ಬೆಂಬಲಿಗರು ಫುಲ್ ಖುಷ್ ಆಗಿದ್ದಾರೆ. ಇನ್ನು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆಜನಾರ್ದನ ರೆಡ್ಡಿ ಮಾತನಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಭಗವಂತನ ಆಶೀರ್ವಾದದಿಂದ ಕಷ್ಟದ ದಿನಗಳು ಮುಗಿಯಲು ಬರುತ್ತಿವೆ. ನಾವು ಏನೇ ಮಾಡಿದರೂ ಕೂಡ ವಿಧಿ ಮತ್ತು ದೇವರ ಆಟದಲ್ಲಿ ಮನುಷ್ಯರಾಗಿ ಬದುಕಬೇಕಾಗುತ್ತದೆ. ನನ್ನ ವಿಧಿಯಲ್ಲಿ ಹುಟ್ಟೂರಿನಿಂದ 14 ವರ್ಷ ದೂರ ಇರಬೇಕು ಅಂತಾ ಭಗವಂತ ಬರೆದಿದ್ದ. ಶ್ರೀರಾಮಚಂದ್ರನಿಗೇ ಕಷ್ಟ ತಪ್ಪಿಲ್ಲ, ಇನ್ನು ಸಾಮಾನ್ಯ ಜನ ನಾವು ಯಾವ ಲೆಕ್ಕ. ಬಳ್ಳಾರಿಗೆ ಅನುಮತಿ ಸಿಕ್ಕಿರುವುದು ಭಗವಂತನ ಕೃಪೆ. ನನ್ನೂರಿನಲ್ಲಿ ನೆಮ್ಮದಿಯಿಂದ ಬದುಕುತ್ತೇನೆ ಎನ್ನುವುದೆ ಖುಷಿ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಈಗ ಲೋಕಾಯುಕ್ತ ಎಫ್ಐಆರ್ ಮತ್ತು ನಾಗೇಂದ್ರ ಜೈಲು ವಿಚಾರವಾಗಿ ಮಾತನಾಡಿದ ಅವರು, ನಮ್ಮ ಸ್ವಾರ್ಥಕ್ಕೆ ತೊಂದರೆ ಕೊಟ್ಟು ಹಿಂಸೆ ಕೊಡುತ್ತೇವೋ ಆ ಕರ್ಮವನ್ನು ವಾಪಸ್ ಅನುಭವಿಸಲೇಬೇಕು. 14 ವರ್ಷಗಳ ಹಿಂದೆ ನನಗೆ ಏನೇನು ಅಪಪ್ರಚಾರ ಮಾಡಿದರು ಅಂತಾ ಕಣ್ಣ ಮುಂದೆಯೇ ಇದೆ. ಸುಳ್ಳು ಆರೋಪ ಒಂದನ್ನೂ ಅವರು ಸಾಬೀತು ಮಾಡಲು ಆಗಲಿಲ್ಲ. ನಾನು ಹೇಳುವುದು ಇಷ್ಟೇ, ಕರ್ಮದ ಫಲದಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಸಿದ್ದರಾಮಯ್ಯ ಮತ್ತು ನಾಗೇಂದ್ರ ವಿಚಾರಗಳು ಎಲ್ಲವೂ ಇಂದಿನ ಬೆಳವಣಿಗೆಗಳಿಗೆ ಸಾಕ್ಷಿ ಎಂದು ಹೇಳಿದ್ದಾರೆ.