ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12 ರ ಗ್ರ್ಯಾಂಡ್ ಫಿನಾಲೆ ಬಳಿಕ ವಿನ್ನರ್ ಗಿಲ್ಲಿ ನಟ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಟ್ರೋಫಿ ಗೆದ್ದ ಖುಷಿಯ ನಡುವೆಯೇ, ಮನೆ ಒಳಗೆ ಆರಂಭವಾದ ಗಿಲ್ಲಿ–ಕಾವ್ಯ ಸ್ನೇಹ ಈಗ ಮದುವೆ ಚರ್ಚೆಯವರೆಗೂ ತಲುಪಿದೆ. ಶೋ ಮುಗಿದ ಕೂಡಲೇ ಅಭಿಮಾನಿಗಳು “ಗಿಲ್ಲಿ–ಕಾವ್ಯ ಮದುವೆ ಮಾಡಿಸೇ ಮಾಡಿಸ್ತೀವಿ” ಎಂದು ಘೋಷಣೆ ಕೂಗಿದ್ದು, ಈ ವಿಚಾರಕ್ಕೆ ಗಿಲ್ಲಿ ಏನ್ ಹೇಳಿದ್ದಾರೆ ನೋಡಿ.
ಮದುವೆ ಚರ್ಚೆ ಬಗ್ಗೆ ಕೇಳಿದಾಗ ಗಿಲ್ಲಿ, “ನಾವು ಇಬ್ಬರೂ ಒಳ್ಳೆಯ ಸ್ನೇಹಿತರು. ಮದುವೆ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಅದು ಭಾಗ್ಯದ ವಿಷಯ” ಎಂದು ಸ್ಪಷ್ಟಪಡಿಸಿದ್ದಾರೆ. ಗಿಲ್ಲಿಯ ಈ ಮಾತುಗಳಿಂದ ಅವರು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗಿಲ್ಲಿ–ಕಾವ್ಯ ಸಂಬಂಧ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.
ಬಿಗ್ ಬಾಸ್ ಆರಂಭದಿಂದಲೇ ಗಿಲ್ಲಿ ಮತ್ತು ಕಾವ್ಯ ನಡುವೆ ಉತ್ತಮ ಸ್ನೇಹ ಕಂಡುಬಂದಿತ್ತು. ಒಟ್ಟಿಗೆ ಸಮಯ ಕಳೆಯುವುದು, ಪರಸ್ಪರ ಬೆಂಬಲ ನೀಡುವುದು ಇವರಿಬ್ಬರ ವಿಶೇಷವಾಗಿತ್ತು. ಕೆಲ ಸಂದರ್ಭಗಳಲ್ಲಿ ಸಣ್ಣಮಟ್ಟದ ಭಿನ್ನಾಭಿಪ್ರಾಯಗಳು ಬಂದರೂ, ಅದು ಸ್ನೇಹಕ್ಕೆ ಧಕ್ಕೆ ತರುವ ಮಟ್ಟಕ್ಕೆ ಹೋಗಿರಲಿಲ್ಲ. ಆಟದ ಭಾಗವಾಗಿ ನಾಮಿನೇಷನ್, ಜಗಳಗಳು ನಡೆದರೂ, ಕೊನೆಯ ಹಂತದಲ್ಲಿ ಅವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು.
ಫಿನಾಲೆ ವಾರದಲ್ಲಿ ಬಿಗ್ ಬಾಸ್ ನೀಡಿದ್ದ ವಿಶೇಷ ಕ್ಷಮೆ ಕೇಳುವ ಅವಕಾಶದಲ್ಲಿ ಇಬ್ಬರೂ ಪರಸ್ಪರ ಕ್ಷಮೆ ಯಾಚಿಸಿದ್ದು ಗಮನ ಸೆಳೆದಿತ್ತು. ಇದರಿಂದ ಅಭಿಮಾನಿಗಳಲ್ಲಿ ಈ ಜೋಡಿಯ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಹುಟ್ಟಿದ್ದವು.


