ಹೊಸದಿಗಂತ ವರದಿ, ವಿಜಯಪುರ:
ಕೊಲೆ ಮಾಡಿದ ಆರೋಪಿಗೆ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 86,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಇಂಡಿಯ ಹುಸೇನ ಬಾಷಾ ಉರ್ಫ್ ಬಾಷಾ ದಾದಾಪೀರ ಶೇಖ ಶಿಕ್ಷೆಗೊಳಗಾದ ಆರೋಪಿ.
ಆರೋಪಿ ಹುಸೇನ ಬಾಷಾ ಉರ್ಫ್ ಬಾಷಾ ದಾದಾಪೀರ ಶೇಖ ಈತ, ದಿಲ್‌ಶಾದ್ ಬೇಗಂ ಆದಮಸಾಬ ಹವಲ್ದಾರ್ ಎಂಬವಳು ತನ್ನ ತಂಗಿಯ ಗಂಡನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆಂದು ಸಂಶಯಪಟ್ಟು ಆಕೆಯ ಮೇಲಿನ ದ್ವೇಷದಿಂದ, ಇಂಡಿ ಪಟ್ಟಣದ ಟಿಪ್ಪು ಸರ್ಕಲ್ ಹತ್ತಿರದ ಅಂಜುಮನ್ ಸ್ಕೂಲ್ ಬಳಿ ರಸ್ತೆಯಲ್ಲಿ ಆಕೆಯನ್ನು ತಲ್ವಾರಗಳಿಂದ ಕುತ್ತಿಗೆಯ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿದ್ದು, ಬಳಿಕ ಮೃತ ದಿಲ್‌ಶಾದ್ ಬೇಗಂಳ ಮಗನಾದ ಮಹ್ಮದ್ ಮುಜಮಿಲ್ ಈತನನ್ನು ಸಹ ಆತ ಕೆಲಸ ಮಾಡುತ್ತಿದ್ದ ಆಟೋ ಮೊಬೈಲ್ಸ್ ಅಂಗಡಿಗೆ ತೆರಳಿ ಆತನ ಮೇಲೂ ಸಹ ತಲ್ವಾರಗಳಿಂದ ಹಲ್ಲೆ ಮಾಡಿ, ಹೊಡೆದು ಬಾರೀ ರಕ್ತಗಾಯ ಮಾಡಿ, ಕೊಲೆ ಮಾಡಲು ಯತ್ನಿಸಿದ ಆರೋಪ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಭಾಸ ಸಂಕದ ಅವರು ಅಭಿಯೋಗದ ಪರ ಹಾಜರ್ ಪಡಿಸಲಾದ ಸಾಕ್ಷಿ, ಪುರಾವೆಗಳನ್ನು ಅವಲೋಕಿಸಿ ಅಭಿಯೋಗವು, ಆರೋಪಿತನಾದ ಹುಸೇನ ಬಾಷಾ ಉರ್ಫ್ ಬಾಷಾ ದಾದಾಪೀರ ಶೇಖ ಮೇಲಿನ ಆಪಾದನೆ ರುಜುವಾತುಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತೀರ್ಮಾನಿಸಿ, ಈ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 86,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಅಲ್ಲದೇ ಪ್ರಕರಣದ ಮೃತ ದಿಲ್‌ಶಾದ್ ಬೇಗಂ ಅವರ ಮಕ್ಕಳಾದ ಗಾಯಾಳು ಮುಜಮಿಲ್ ಹಾಗೂ ಫಿರ್ಯಾದಿದಾರ ಮುದಸ್ಸರ್ ಅವರುಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲು ಶಿಫಾರಸ್ಸು ಸಹ ಮಾಡಲಾಗಿರುತ್ತದೆ.
1ನೇ ಅಧಿಕ ಸರ್ಕಾರಿ ಅಭಿಯೋಜಕರಾದ ವಿ.ಎಸ್.ಇಟಗಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.