ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ, ಅಲ್ಲಿನ ಮಸೀದಿ ಹಾಗೂ ಶಾಲೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 18 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಗಾಜಾಪಟ್ಟಿಯಲ್ಲಿರುವ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದ ಮಸೀದಿ ಹಾಗೂ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. 93 ಜನರು ಗಾಯಗೊಂಡಿದ್ದಾರೆ. ಮೊಟ್ಟಮೊದಲು 2023 ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಕೊಂದಿತ್ತು ಅಷ್ಟೇ ಅಲ್ಲದೆ 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿತ್ತು.
ಗಾಜಾದ ಮೇಲೆ ಇಸ್ರೇಲ್‌ನ ನಂತರದ ಮಿಲಿಟರಿ ದಾಳಿಯು ಸುಮಾರು 42,000 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ. ಗುರುವಾರವೂ ನಡೆದಿತ್ತು ದಾಳಿ ಇಸ್ರೇಲ್ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಲೆಬನಾನ್ ಮತ್ತು ಗಾಜಾ ಪಟ್ಟಿಯ ಮೇಲೆ ಗುರುವಾರ ಇಸ್ರೇಲ್ ಮುಗಿಬಿದ್ದಿದೆ. ಬೈರೂತ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಇರಾನ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ದಾಳಿ ನಡೆಸಿದ್ದು ಲೆಬನಾನ್ ಹಾಗೂ ಗಾಜಾ ಪಟ್ಟಿಯ ಮೇಲೆ ಬಾಂಬ್ ಸುರಿಮಳೆ ಮಾಡಿದೆ. ಗಾಜಾ ಪಟ್ಟಿಯ ಮೇಲೂ ದಾಳಿ ನಡೆಸಿದ್ದು ಹಮಾಸ್ ಮುಖ್ಯಸ್ಥ ರಾವಿ ಮುಷ್ತಾಹನನ್ನು ಹತ್ಯೆ ಮಾಡಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇಸ್ರೇಲ್ ನಡೆಸಿರುವ ದಾಳಿಯಿಂದಾಗಿ ಸುಮಾರು 12 ಲಕ್ಷ ಮಂದಿಯನ್ನು ಲೆಬನಾನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ.