ದೆಹಲಿ ಭೇಟಿ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಭೇಟಿಯಾದ ಸತೀಶ್ ಜಾರಕಿಹೊಳಿ

ಹೊಸದಿಗಂತ ತುಮಕೂರು :

ದೆಹಲಿಗೆ ಭೇಟಿ ನೀಡಿದ ಬೆನ್ನೆಲ್ಲಿಯೇ ಸಚಿವ ಸತೀಶ್ ಜಾರಕಿಹೊಳಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ತುಮಕೂರಿನಲ್ಲಿ ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ಇಬ್ಬರು ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಎಫ್ಐಆರ್ ದಾಖಲಾದ ಬೆನ್ನಲ್ಲೆ ಬೆಂಗಳೂರಿನ ಗೃಹ ಸಚಿವ ಮನೆಯಲ್ಲಿ ಭೇಟಿಯಾಗಿದ್ದ ಸತೀಶ್ ಜಾರಕಿಹೊಳಿಯವರು, ದಿಢೀರನೇ ದೆಹಲಿಗೆ ತೆರಳಿ ಹೈ ಕಮಾಂಡ್ ಭೇಟಿಯಾಗಿ ಬಂದ ಬೆನ್ನಲ್ಲೇ ತುಮಕೂರಿನಲ್ಲಿ ಎಸ್ಐಟಿ ಬಿರ್ಲಾ ಆಡಿಟೋರಿಯಂನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಖಾಸಗಿಯಾಗಿ ಇಬ್ಬರೂ ಸಚಿವರು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೂ ಸಾಕಾಗಿ ಹೋಗಿದೆ ರಾಜೀನಾಮೆ ಪ್ರಹಸನ ಎಂದು ಹೇಳಿದ ಸಂದರ್ಭದಲ್ಲೇ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಲು ನಿಂತಾಗ ಸಭಿಕರಿಂದ ಮುಂದಿನ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಜೈವಾಗಲಿ ಎಂಬ ಜೈಕಾರ ಮೊಳಗಿತ್ತು.

ಪರಮೇಶ್ವರ್ ಮತ್ತು ಜಾರಕಿಹೊಳಿ ಇಬ್ಬರೂ ಮುಖ್ಯಮಂತ್ರಿ ಪದವಿಯ ಅಕಾಂಕ್ಷಿಗಳಾಗಿದ್ದು ತಮ್ಮದೇಯಾದ ರಾಜಕೀಯ ಪಟ್ಟುಗಳನ್ನು ಹಾಕುತ್ತಿದ್ದು, ಸಿದ್ದರಾಮಯ್ಯ ಏನಾದರೂ ರಾಜೀನಾಮೆ ನೀಡಿದರೆ ಈ ಇಬ್ಬರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುವ ಸಂಭವವಿದೆ ಎನ್ನಲಾಗುತ್ತಿದೆ, ಈ ಹಿನ್ನಲೆಯಲ್ಲಿಯೇ ಈ ಇಬ್ಬರ ಭೇಟಿ ಮಹತ್ವ ಪಡೆದುಕೊಂಡಿದೆ.

ಪ್ರತಿ ವರ್ಷವೂ ತುಮಕೂರಿನಲ್ಲಿ ನಾಗರಿಕರ ದಸರಾ ನಡೆದರೆ, ಈ ಬಾರಿ ಸರ್ಕಾರದ ವತಿಯಿಂದ ನಡೆಯುತ್ತಿದ್ದು, ನಾಡದೇವಿಯ ದಸರಾ ಪೂಜೆಯ ಸಂದರ್ಭದಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ಅವರು ದಂಪತಿಗಳ ಸಮೇತ ಹೋಮ-ಹವನಗಳಲ್ಲಿ ಭಾಗವಹಿಸಿ, ನಾಡದೇವತೆಯನ್ನು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿರುವುದರ ಮರ್ಮವೇನು ಎಂಬ ಚರ್ಚೆಗಳು ನಡೆಯುತ್ತಾ ಇವೆ.

ಇಂದು ಸಚಿವ ಸತೀಶ್ ಜಾರಕಿಹೊಳಿಯ ಭೇಟಿ ರಾಜಕೀಯ ವಲಯದಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ನೀಡುವುದು ಖಚಿತ ಎಂಬಂತೆ ಈ ಇಬ್ಬರೂ ಪದೇ ಪದೇ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!