ಹೊಸದಿಗಂತ ಶಿವಮೊಗ್ಗ :
ಉದ್ಯಮಿಯ ಕೊಲೆಯ ಯತ್ನ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಅಮ್ಮು ಯಾನೆ ಹಬೀಬುಲ್ಲಾ (31) ಬಂಧಿತ ಆರೋಪಿಯಾಗಿದ್ದು, ಈತ ಸೆ.13 ರಂದು ಉದ್ಯಮಿಯ ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗೆ ಕ್ರಮಕೈಗೊಳ್ಳಲಾಗಿತ್ತಾದರೂ ಈತ ತಲೆಮರೆಸಿಕೊಂಡಿದ್ದ.
ಭಾನುವಾರ ತಡರಾತ್ರಿ ಆರೋಪಿ ಗರುಡ ಲೇಔಟ್‌ನಲ್ಲಿದ್ದಾನೆಂಬ ಮಾಹಿತಿ ಆಧರಿಸಿ ತುಂಗ ನಗರ ಠಾಣೆ ಇನ್ಸ್‌ಪೆಕ್ಟರ್ ಗುರುರಾಜ್ ಮತ್ತು ಸಿಬ್ಬಂದಿಗಳು ತೆರಳಿದ್ದರು. ಪೊಲೀಸರು ಬಂಧಿಸಲೆತ್ನಿಸಿದಾಗ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ್ದ. ಇದರಿಂದಾಗಿ ಪಿಐ ಗುರುರಾಜ್ ಆತ್ಮ ರಕ್ಷಣೆಗಾಗಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಆರೋಪಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈತನ ಮೇಲೆ ಕೊಲೆ ಪ್ರಕರಣವೊಂದು ದಾಖಲಾಗಿತ್ತು. ಪಿಸಿ ಜಯಪ್ಪ ಗಾಯಗೊಂಡಿದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.