ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಕೆ.ಪಿ ಅಗ್ರಹಾರದ ಭುವನೇಶ್ವರಿ ನಗರದಲ್ಲಿ ಮನೆಯಲ್ಲಿ ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥರಾದ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾದ ಮೂವರಲ್ಲಿ 5 ವರ್ಷದ ಮಗು ಸಾವನ್ನಪ್ಪಿದ್ರೆ, ತಂದೆ-ತಾಯಿಗೆ ಇನ್ನೂ ಪ್ರಜ್ಞೆ ಬಂದಿಲ್ಲ.
ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಸ್ವಸ್ಥರಾದ ತಂದೆ, ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇಕ್ ತಿಂದ 5 ವರ್ಷದ ಧೀರಜ್ ಫುಡ್ ಪಾಯಿಸನ್ ಇಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಬಾಲರಾಜ್ ಎಂಬ ವ್ಯಕ್ತಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಬಾಲರಾಜ್ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದ. ಮನೆಯಲ್ಲಿ ಪತ್ನಿ ನಾಗಲಕ್ಷ್ಮೀ ಮತ್ತು ಮಗ ಧೀರಜ್ ಜೊತೆ ಸೇರಿ ಕೇಕ್ ತಿಂದಿದ್ದ. ಕೇಕ್ ತಿಂದ ನಂತರ ಮೂವರು ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೊಲೀಸರಿಗೆ ದೂರು ಕೊಡಲು, ಈ ಘಟನೆ ಹೇಗೆ ನಡೆದಿದೆ ಅನ್ನೋ ಬಗ್ಗೆ ಹೇಳಲು ಯಾರು ಇಲ್ಲ. ಘಟನೆ ಹೀಗೆ ಆಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಪೊಲೀಸರು ಮಾಹಿತಿ ಪಡೆಯಲು ಕಾಯುತ್ತಿದ್ದಾರೆ.
ಕೇಕ್ ತಿಂದ ಮೂವರಿಗೂ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಐಸಿಯುನಲ್ಲಿರುವ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಿಂದ ರಿಪೋರ್ಟ್ ಬಂದ ಬಳಿಕ ಅಸಲಿಗೆ ಏನಾಯ್ತು ಅನ್ನೋದು ಗೊತ್ತಾಗಬೇಕಿದೆ.