ಈಗ ರಾತ್ರಿ ಬೀದಿ ದೀಪಗಳು ಬೆಳಗುತ್ತಿದ್ರೆ ನಮಗೆ ಅದೇನೋ ದೊಡ್ಡ ವಿಷ್ಯಾನೇ ಅಲ್ಲ. ಆದರೆ ಒಂದು ಕಾಲದಲ್ಲಿ ಸೂರ್ಯಾಸ್ತವಾದ ಬಳಿಕ ನಗರಗಳೆಲ್ಲಾ ಕತ್ತಲಲ್ಲಿ ಮುಳುಗುತ್ತಿದ್ದವು. ಆಗ ವಿದ್ಯುತ್ ಬೆಳಕು ಎನ್ನುವುದು ಅಚ್ಚರಿಯ ಸಂಗತಿ, ವೈಜ್ಞಾನಿಕ ಅದ್ಭುತವೆನ್ನಿಸಿತ್ತು. ಇಂತಹ ಸಂದರ್ಭದಲ್ಲೇ ಏಷ್ಯಾ ಖಂಡದ ಇತಿಹಾಸದಲ್ಲಿ ಮೊದಲ ಬಾರಿಗೆ ಬೀದಿ ದೀಪಗಳು ವಿದ್ಯುತ್ ಬೆಳಕಿನಿಂದ ಜಗಮಗಿಸಿದ ಕ್ಷಣ ನಿಜಕ್ಕೂ ಕ್ರಾಂತಿಕಾರಿಯಾಗಿತ್ತು. ಅಚ್ಚರಿಯ ವಿಷಯವೆಂದರೆ, ಆ ಐತಿಹಾಸಿಕ ಸಾಧನೆ ನಡೆದಿದ್ದು ನಮ್ಮದೇ ದೇಶದ ನಗರದಲ್ಲಿ.
ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ಬೀದಿ ದೀಪಗಳು ಬೆಳಗಿದ ನಗರ ಬೆಂಗಳೂರು. 1905ರಲ್ಲಿ, ಆಗಿನ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಬೆಂಗಳೂರಿನಲ್ಲಿ ವಿದ್ಯುತ್ ದೀಪಗಳನ್ನು ಸಾರ್ವಜನಿಕ ರಸ್ತೆಗಳ ಮೇಲೆ ಅಳವಡಿಸಲಾಯಿತು. ಶಿವನಸಮುದ್ರ ಜಲವಿದ್ಯುತ್ ಯೋಜನೆಯಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಮೊದಲಿಗೆ ಬಳಸಿಕೊಂಡ ನಗರವೂ ಇದೇ. ಕಾವೇರಿ ನದಿಯ ಮೇಲೆ ನಿರ್ಮಿಸಲಾದ ಈ ಜಲವಿದ್ಯುತ್ ಕೇಂದ್ರವು ಭಾರತದ ವಿದ್ಯುತ್ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದೆ.
ಅಂದಾಜು 7.46 ಲಕ್ಷ ರೂ. ವೆಚ್ಚದಲ್ಲಿ, ವಿದ್ಯುತ್ ದೀಪಗಳನ್ನು ಬೆಳಗಿಸುವ ಯೋಜನೆಯು ಮೊದಲು ಕನಕಪುರದಲ್ಲಿ ಪ್ರಾರಂಭವಾಯಿತು, ಸ್ವಿಚ್ ಸ್ಟೇಷನ್ ಅಳವಡಿಸಿ ನಗರಕ್ಕೆ ಸುಮಾರು 92 ಕಿ.ಮೀ. ಉದ್ದದ ಲೈನ್‌ಗಳನ್ನು ಕೇವಲ ಒಂಬತ್ತು ತಿಂಗಳಲ್ಲಿ ಹಾಕಲಾಯಿತು. ವಿಕ್ಟೋರಿಯಾ ಆಸ್ಪತ್ರೆಯ ಬಳಿ ಒಂದು ಸಬ್‌ಸ್ಟೇಷನ್ ಅನ್ನು ನಿರ್ಮಿಸಲಾಯಿತು, ಈ ಯೋಜನೆಗೆ ಕನಕಪುರದಿಂದ ವಿದ್ಯುತ್ ಪಡೆಯಲು 450 ಕೆ.ವಿ. ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ನೊಂದಿಗೆ ವಿದ್ಯುದೀಕರಣ ಯೋಜನೆಗೆ ಅಡಿಪಾಯ ಹಾಕಿದ ಒಂಬತ್ತು ತಿಂಗಳ ನಂತರ, ಆಗಸ್ಟ್ 5, 1905 ರಂದು ಬೆಂಗಳೂರು ಬೀದಿ ದೀಪಗಳಲ್ಲಿ ತನ್ನ ಮಹತ್ವದ ಕ್ಷಣವನ್ನು ಕಂಡಿತು. (ಇತಿಹಾಸಕಾರ ಗಜಾನನ ಶರ್ಮಾರವರ “ಬೆಳಕಾಯ್ತು ಕರ್ನಾಟಕ” ಎಂಬ ಗ್ರಂಥದಲ್ಲಿ ಈ ಮಾಹಿತಿ ನೀಡಿದ್ದಾರೆ.)
ಆ ಕಾಲದಲ್ಲಿ ವಿದ್ಯುತ್ ಬೆಳಕು ಬೀದಿಗಳಲ್ಲಿ ಹೊಳೆಯತೊಡಗಿದಾಗ, ಜನರು ಅದನ್ನು ನೋಡಲು ಗುಂಪು ಗುಂಪಾಗಿ ಸೇರುತ್ತಿದ್ದರಂತೆ. ಕೆರೊಸಿನ್ ಲ್ಯಾಂಪ್‌ಗಳು ಮತ್ತು ಅನಿಲ ದೀಪಗಳ ಜಾಗವನ್ನು ವಿದ್ಯುತ್ ದೀಪಗಳು ಪಡೆದಿದ್ದು, ನಗರ ಜೀವನದ ಸುರಕ್ಷತೆ, ವ್ಯಾಪಾರ ಮತ್ತು ರಾತ್ರಿ ಸಂಚಾರಕ್ಕೆ ಹೊಸ ಆಯಾಮ ನೀಡಿತು. ಇದರೊಂದಿಗೆ ಬೆಂಗಳೂರು ‘ಆಧುನಿಕ ನಗರ’ ಎಂಬ ಗುರುತನ್ನು ನಿಧಾನವಾಗಿ ಪಡೆಯತೊಡಗಿತು.
ಈ ಸಾಧನೆ ಕೇವಲ ತಾಂತ್ರಿಕ ಮುನ್ನಡೆಯಷ್ಟೇ ಅಲ್ಲ, ಭಾರತದ ವೈಜ್ಞಾನಿಕ ದೃಷ್ಟಿಕೋನ ಮತ್ತು ಆಡಳಿತಾತ್ಮಕ ದೂರದೃಷ್ಟಿಯ ಸಂಕೇತವೂ ಹೌದು. ಇಂದಿಗೂ ‘ಸಿಲಿಕಾನ್ ಸಿಟಿ’ ಎಂದು ಗುರುತಿಸಲ್ಪಡುವ ಬೆಂಗಳೂರಿನ ಈ ಆರಂಭಿಕ ವಿದ್ಯುತ್ ಬೆಳಕು, ನಗರವನ್ನು ಬೆಳಕಿನ ದಾರಿಯಲ್ಲಿ ನಡೆಸಿದ ಮೊದಲ ಹೆಜ್ಜೆಯೆಂದೇ ಹೇಳಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)


