ಸದ್ಯಕ್ಕೆ ನಮ್ಮಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ: ಸಾರಿಗೆ ಸಚಿವ ರಾಮಲಿಂಗರೆಡ್ಡಿ

ಹೊಸದಿಗಂತ ವರದಿ, ಚಿತ್ರದುರ್ಗ 
ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಈಗ ಅಪ್ರಸ್ತುತ. ಮುಂದೆ ದಲಿತ ಸಿಎಂ, ಪಿಎಂ ಆಗಲಿ ಬೇಡ ಎನ್ನಲು ಆಗಲ್ಲ. ಈಗ ಸದ್ಯಕ್ಕೆ ನಮ್ಮಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ನಾಯಕರು ಸಾಕಷ್ಟು ಮಂದಿ ಇದ್ದಾರೆ. ಮುಂದಕ್ಕೆ ಅವರು ಬೇಕಾದರೆ ಸಿಎಂ ಆಗಲಿ. ಮುಂದೆ ಅವರು ದೇಶಕ್ಕೆ ಪ್ರಧಾನಿ, ರಾಷ್ಟ್ರಪತಿಯೂ ಆಗಬಹುದು. ಮುಂದೆ ದಲಿತ ಸಮುದಾಯದವರು ಸಿಎಂ ಆಗುವ ಅವಕಾಶ ಇದೆ ಎಂದರು.
ಹರಿಯಾಣದಲ್ಲಿ ಬಿಜೆಪಿ ಮುನ್ನಡೆ ವಿಚಾರ ಹರಿಯಾಣದಲ್ಲಿ ಬಿಜೆಪಿ ಬರಲ್ಲ ಅಂದುಕೊಂಡಿದ್ದೆವು. ಬಿಜೆಪಿ ೧೦ ವರ್ಷದಿಂದ ಆಡಳಿತದಲ್ಲಿತ್ತು. ಜನರಿಗೂ ಬೇಸರ ಆಗಿದೆ. ಮೋದಿ ಆಡಳಿತದ ಬಗ್ಗೆ ಬೇಸರ ಇದೆ. ಆದರೂ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾಗಿದೆ. ಕೆಲವು ಬಾರಿ ಜನರಿಗೆ ಬಿಜೆಪಿಗರ ಮಾತು ಇಂಪಾಗಿ ಕೇಳಿಸುತ್ತೆ. ಜನರು ಬಿಜೆಪಿಯ ಸುಳ್ಳನ್ನು ಬೇಗ ನಂಬುತ್ತಾರೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ಎಕ್ಸ್‌ಪರ್ಟ್. ಈ ಬಾರಿಯೂ ಜನ ನಂಬುವಂತೆ ಬಿಜೆಪಿಗರು ಸುಳ್ಳುಗಳನ್ನು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇಲ್ಲೂ ನಂಬಿದ್ದರಲ್ಲ ಎಂದು ವ್ಯಂಗವಾಡಿದರು.
ಸಿದ್ದರಾಮಯ್ಯ ಐದು ವರ್ಷ ಇರುತ್ತಾರೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಐದು ವರ್ಷ ಸಿಎಂ ಸಿದ್ದರಾಮಯ್ಯ ಇರುತ್ತಾರೆ ಅಂತ ನಾನು ಹೇಳ್ತೀನಿ. ವಿಜಯೇಂದ್ರಗೆ ಮಲಗಿದ್ದಾಗ ಕನಸು ಬೀಳುತ್ತೆ. ಅದನ್ನೇ ನಿಜ ಅಂದುಕೊಂಡು ಎಲ್ಲರಿಗೂ ಹೇಳುತ್ತಾರೆ. ಮುಡಾ ಕೇಸ್ ಅದರ ಪಾಡಿಗೆ ಅದು ನಡೆಯುತ್ತೆ. ಬಿಜೆಪಿ, ಜೆಡಿಎಸ್ ನೂರಾರು ಹಗರಣ ಇದೆಯಲ್ಲ. ಅದರ ಬಗ್ಗೆ ನಾವು ಮೊದಲು ಮಾತಾಡೋಣ. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಭೇಟಿ ವಿಚಾರ ಅವರಿಬ್ಬರದ್ದು. ವೈಯಕ್ತಿಕ ಸಭೆ ನಡೆಸಿಲ್ಲ. ರಾಜ್ಯಕ್ಕೆ ಸಂಬಂಧಪಟ್ಟಂತೆ, ಪಕ್ಷದ ಬಗ್ಗೆ ಚರ್ಚೆ ಮಾಡಿರಬಹುದು ಎಂದು ತಿಳಿಸಿದರು.
ಜಾತಿ ಜನಗಣತಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಜಾತಿಗಣತಿ ವಿಚಾರ ಬಹಳ ದಿನದಿಂದ ಇತ್ತು. ಯಾವತ್ತಿದ್ದರೂ ಒಂದು ದಿನ ಬರಬೇಕಿತ್ತಲ್ಲ. ಆಮೇಲೆ ಇದೆಲ್ಲಾ ಜಾತಿಗಣತಿಯನ್ನು ಯಾರೂ ಸಹ ಓದಿಲ್ಲ. ವರದಿ ಬಂದ ಮೇಲೆ ಏನಿದೆ ಅಂತ ಗೊತ್ತಾಗುತ್ತೆ. ಒಳ್ಳೇಯದು ಇದ್ದರೆ ಸರಿ. ತಪ್ಪಿದ್ದರೆ ಸರಿ ಮಾಡಿಕೊಳ್ಳಿ ಎಂದು ಸಲಹೆ ನೀಡಬಹುದು. ಎಲ್ಲರೂ ಜಾತಿಗಣತಿ ಬಗ್ಗೆ ತಪ್ಪಿದ್ದರೆ ಸಲಹೆ ಕೊಡಲಿ. ತಪ್ಪಿದ್ದಲ್ಲಿ ಸರಿ ಮಾಡಿಕೊಳ್ಳಬಹುದು. ಜಾತಿಗಣತಿ ಜಾರಿ ಆದ ಮೇಲೆ ಸರಿ ಇದೆಯೋ, ತಪ್ಪಿದೆಯೋ ಎಂಬುದು ಗೊತ್ತಾಗುತ್ತದೆ  ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ದ್ರಾಕ್ಷಾ ಮಂಡಳಿ ಅಧ್ಯಕ್ಷ ಯೋಗಿಶ್ ಬಾಬು. ಮೈಲಾರಪ್ಪ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!