ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ರಾಜಕೀಯದಲ್ಲಿ ಚುನಾವಣೆಗಳ ಕಾವು ನಿಧಾನವಾಗಿ ಏರುತ್ತಿರುವ ಹೊತ್ತಿನಲ್ಲಿ, ಎನ್‌ಡಿಎ ಮೈತ್ರಿಕೂಟ ತನ್ನ ಪ್ರಚಾರ ಯಾತ್ರೆಗೆ ಅಧಿಕೃತ ಆರಂಭ ಘೋಷಿಸಿದೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಜನವರಿ 23ರಂದು ಮಧುರಾಂತಕಂನಲ್ಲಿ ಭಾರಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದು, ಇದರ ಮೂಲಕ ಎನ್‌ಡಿಎಯ ಚುನಾವಣಾ ಅಭಿಯಾನ ಆರಂಭವಾಗಲಿದೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ತಿಳಿಸಿದ್ದಾರೆ.
ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಸಂಘಟಿಸುವ ಉದ್ದೇಶದಿಂದ, ಪ್ರಧಾನಿ ಮೋದಿಯವರು ಮೊದಲ ಹಂತದಲ್ಲೇ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಪ್ರಧಾನಿ ಸರಣಿ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಎನ್‌ಡಿಎ ಮೈತ್ರಿಕೂಟದ ಅಂತಿಮ ರೂಪುರೇಷೆಗಳ ಬಗ್ಗೆ ಮಾತನಾಡಿದ ನಾಗೇಂದ್ರನ್, ಮಿತ್ರಪಕ್ಷಗಳ ಹೆಸರುಗಳ ಬಗ್ಗೆ ಸ್ಪಷ್ಟತೆ ನೀಡಲು ನಿರಾಕರಿಸಿದರು. ಟಿಟಿವಿ ದಿನಕರನ್ ಅವರ ಎಎಂಎಂಕೆ, ಮಾಜಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಹಾಗೂ ಡಿಎಂಡಿಕೆ ಸೇರ್ಪಡೆಯ ಕುರಿತ ಊಹಾಪೋಹಗಳ ನಡುವೆಯೂ, ಯಾವುದೇ ಪಕ್ಷದ ಹೆಸರನ್ನು ಅವರು ದೃಢಪಡಿಸಲಿಲ್ಲ. ಆದರೆ, ಎನ್‌ಡಿಎ ಬಲಿಷ್ಠ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


