ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮತ್ತೆ ಆದಿಅಕ್ರದ ಗದ್ದುಗೆ ಏರಿದ್ದು, ಇತ್ತ ಜಾಟ್ಸ್ ಮತ್ತು ಜಿಲೇಬಿ ಎಂಬ ಎರಡು ಪದಗಳು ಭಾರಿ ಸದ್ದು ಮಾಡುತ್ತಿವೆ.
ಇದಕ್ಕೆ ಕಾರಣ ಕಾಂಗ್ರೆಸ್) ಪಕ್ಷ ಈ ಎರಡು ಪದಗಳನ್ನು ಪ್ರಚಾರ ಸಮಯ ಪದೇಪದೆ ಉಲ್ಲೇಖಿಸುತ್ತಿತ್ತು. ಆದರೆ, ಇಂದಿನ ಚುನಾವಣಾ ಫಲಿತಾಂಶ ನೋಡಿದರೆ ಕಾಂಗ್ರೆಸ್ ಪಾಲಿಗೆ ಜಿಲೇಬಿ ರುಚಿ ನೀಡಲಿಲ್ಲ.
ಹರಿಯಾಣದ ಗೊಹಾನಾದಲ್ಲಿ ತಯಾರಾಗುವ ಜಿಲೇಬಿಗೆ ಒಳ್ಳೆಯ ಹೆಸರಿದೆ. ಹರಿಯಾಣ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಾಗ ಜಿಲೇಬಿಯನ್ನು ಪ್ರಸ್ತಾಪ ಮಾಡುತ್ತಲೇ ಇದ್ದರು. ತನ್ನ ಪ್ರತಿ ಭಾಷಣದಲ್ಲಿ ಜಿಲೇಬಿ ಹೆಸರೇಳದೇ ಇರುತ್ತಿರಲಿಲ್ಲ. ರಸಭರಿತವಾದ ಸಿಹಿ ತಿಂಡಿಯನ್ನು ಹೆಚ್ಚಾಗಿ ತಯಾರಿಸಿ ರಫ್ತು ಮಾಡುವಂತೆ ಕರೆ ನೀಡಿದ ತನ್ನ ಹೇಳಿಕೆಯನ್ನು ಕೂಡ ಬಿಜೆಪಿ ಲೇವಡಿ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳುತ್ತಲೇ ಇದ್ದರು.
ಈಗ ಟ್ರೆಂಡ್ ಯಾಕೆ?
ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಜಿಲೇಬಿ ತಯಾರಿಸಲು ಆರ್ಡರ್ ನೀಡಿದ್ದರು. ಅಷ್ಟೇ ಅಲ್ಲದೇ ಫಲಿತಾಂಶ ಪ್ರಕಟವಾಗುವ ಮೊದಲೇ ಜಿಲೇಬಿಯನ್ನು ಕಾಂಗ್ರೆಸ್ ಕೆಲ ಕಡೆ ಹಂಚಿಕೊಂಡಿತ್ತು.
ಬೆಳಗ್ಗೆ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬೆಂಬಲಿಗರು ಜಿಲೇಬಿ ಫೋಟೋವನ್ನು ಹಾಕತೊಡಗಿದ್ದರು. ಆದರೆ ಫಲಿತಾಂಶ ಬದಲಾಗುತ್ತಿದ್ದಂತೆ ಬಿಜೆಪಿ ಬೆಂಬಲಿಗರು ಈಗ ಜಿಲೇಬಿ ಫೋಟೋವನ್ನು ಹಾಕಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಕಾರಣ ಈಗ ಜಿಲೇಬಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ಗೋಹಾನಾದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಾಥುರಾಮ್ ಹಲ್ವಾಯಿಯ ಜಿಲೇಬಿ ಬಾಕ್ಸ್ ಅನ್ನು ಹಿಡಿದುಕೊಂಡು, ಇವುಗಳನ್ನು ದೇಶಾದ್ಯಂತ ಮಾರಾಟ ಮಾಡಬೇಕು ಮತ್ತು ರಫ್ತು ಮಾಡಬೇಕು ಎಂದು ಹೇಳಿದ್ದರು. ಇದೇ ಜಿಲೇಬಿಯಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದರು.ಮಾಥುರಾಮ್ ಅವರ ಜಿಲೇಬಿಯನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಿದರೆ ಮತ್ತು ರಫ್ತು ಮಾಡಿದರೆ, ಒಂದು ದಿನಕ್ಕೆ 20,000 ದಿಂದ 50,000 ಜನರು ಅವರ ಕಾರ್ಖಾನೆಯಲ್ಲಿ ಕೆಲಸ ಮಾಡಬಹುದು. ಮಾಥುರಾಮ್ ಅವರಂತಹ ವ್ಯಾಪಾರಿಗಳು ಕೇಂದ್ರದ ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿಯಿಂದ ನೊಂದಿದ್ದಾರೆ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಈ ಹೇಳಿಕೆಗಳನ್ನು ಬಿಜೆಪಿ ನಾಯಕರು ಗೇಲಿ ಮಾಡಿದರು. ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಮಾತನಾಡಿ, ನನಗೂ ಗೋಹನಾ ಜಿಲೇಬಿ ಇಷ್ಟ. ಈಗ ರಾಹುಲ್ ಗಾಂಧಿ ಫ್ಯಾಕ್ಟರಿ ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಜಿಲೇಬಿಯನ್ನು ಹೇಗೆ ತಯಾರಿಸುತ್ತಾರೆ ಮತ್ತು ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ರಾಹುಲ್ ಅವರಿಗೆ ಭಾಷಣವನ್ನು ಬರೆದುಕೊಟ್ಟವರು ಸರಿಯಾಗಿ ಬರೆದುಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ರಾಹುಲ್ ಗಾಂಧಿ ತಮ್ಮ ಮನೆಗೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ವ್ಯಂಗ್ಯವಾಡಿದ್ದರು.
ಕುತೂಹಲಕಾರಿ ಸಂಗತಿ ಏನೆಂದರೆ, ತಿಂಗಳುಗಳ ಹಿಂದೆ ಅಂದರೆ, ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಗೋಹನಾ ಜಿಲೇಬಿ ಪ್ರಸ್ತಾಪವಾಗಿತ್ತು. ಇಂಡಿಯಾ ಒಕ್ಕೂಟದ ಮೇಲೆ ದಾಳಿ ಮಾಡಿದ್ದ ಪ್ರಧಾನಿ ಮೋದಿ, ತಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನ ಮಂತ್ರಿಗಳನ್ನು ಹೊಂದುವ ಸೂತ್ರವನ್ನು ಇಂಡಿಯಾ ಒಕ್ಕೂಟ ಹೊಂದಿದೆ. ಪ್ರಧಾನಿ ಹುದ್ದೆಯೆಂದರೆ ನಮ್ಮ ಮಾಥುರಾಮ್ ಅವರ ಜಲೇಬಿಯೇ ಎಂದು ಅವರನ್ನು ಕೇಳಿ ಎಂದು ಜನರನ್ನು ಉದ್ದೇಶಿಸಿ ಮೋದಿ ಹೇಳಿದ್ದರು.