ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನನ್ನ ವಿರುದ್ಧದ ಷಡ್ಯಂತ್ರ ಇದು, ನನ್ನ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದಾರೆ ಮತ್ತು ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.
ನಾನು ಆ ಮಹಿಳೆಯನ್ನು ಮುಟ್ಟಿದ್ದರೆ ನನ್ನ ತಾಯಿಯನ್ನು ಮುಟ್ಟಿದ ಹಾಗೆ. ಕೇವಲ ಎರಡು-ಮೂರು ಸಲ ನಡೆದ ವಿಡಿಯೊ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದೇನೆ. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ನಾನೂ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ ಎಂದಿದ್ದಾರೆ.
ವಿನಯ್ ಕುಲಕರ್ಣಿ ಅವರ ದೂರಿನ ಮೇರೆಗೆ ಬೆಂಗಳೂರಿನ ಸಂಜಯನಗರ ಪೊಲೀಸರು ಖಾಸಗಿ ಕನ್ನಡ ಸುದ್ದಿ ವಾಹಿನಿಯ ಮಾಲೀಕ ಮತ್ತು ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಸುದ್ದಿ ವಾಹಿನಿಯ ಮಾಲೀಕ A1 ಮತ್ತು ಮಹಿಳೆಯನ್ನು ಎರಡನೇ ಆರೋಪಿ ಎಂದು ಹೆಸರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 3 (5), 308 (2), 61 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
2022ರಲ್ಲಿ ಹಾವೇರಿ ಜಿಲ್ಲೆಯ ಮಹಿಳೆಯ ಪರಿಚಯವಾಗಿತ್ತು ಎಂದು ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದಾರೆ. ತಾನು ರೈತ ಪರ ಕಾರ್ಯಕರ್ತೆ ಎಂದು ಹೇಳಿಕೊಂಡು ಆಕೆ ಕರೆಗಳನ್ನು ಮಾಡಿದ್ದಳು. ಆದರೆ, ಖಾಸಗಿ ವಾಹಿನಿಯೊಂದರಲ್ಲಿ ಸುಲಿಗೆ ಸಂತ್ರಸ್ತರ ಕುರಿತು ಕಾರ್ಯಕ್ರಮವಿದ್ದು, ಆಕೆಯ ವಿರುದ್ಧದ ವಂಚನೆ, ಬ್ಲಾಕ್‌ಮೇಲ್ ಪ್ರಕರಣಗಳ ಬಗ್ಗೆ ತಿಳಿದ ನಂತರ ನಾನು ಅವಳ ಕರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಎಂದು ವಿನಯ್ ಕುಲಕರ್ಣಿ ದೂರಿನಲ್ಲಿ ತಿಳಿಸಿದ್ದಾರೆ.
ಎರಡು ವರ್ಷಗಳಿಂದ ಅವಳೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ಇದೇ ವೇಳೆ ಸುದ್ದಿ ವಾಹಿನಿಯ ಮಾಲೀಕ, ಮಹಿಳೆ ಹಾಗೂ ಇತರರು ಆಡಿಯೋ ಮತ್ತು ವಿಡಿಯೋ ದಾಖಲೆಗಳನ್ನು ಪ್ರಸಾರ ಮಾಡುವ ಮೂಲಕ ನನ್ನ ಇಮೇಜ್ ಹಾಳು ಮಾಡಲು ಸಂಚು ರೂಪಿಸಿದ್ದರು. ಸೆಪ್ಟೆಂಬರ್ 24 ರಂದು ಸುದ್ದಿ ವಾಹಿನಿಯ ಮಾಲೀಕ ನನ್ನ ಮೊಬೈಲ್ ಫೋನ್‌ಗೆ ಕರೆ ಮಾಡಿ ನಾನು ಮಹಿಳೆಗೆ ವಿಡಿಯೋ ಕಾಲ್ ಮಾಡುತ್ತಿರುವ ಸುದ್ದಿಯನ್ನು ಪ್ರಸಾರ ಮಾಡುವುದಾಗಿ ಹೇಳಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.