ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಭಾರೀ ಸದ್ದು ಮಾಡಿತ್ತು. ಇದಾದ ಬಳಿಕ ಕೆಲವು ಹಿರಿಯ ನಟ, ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದವು. ಇದೀಗ ಡ್ರಗ್ಸ್ ಪ್ರಕರಣದಲ್ಲಿ ಕೆಲ ನಟರು ಸಿಲುಕಿಕೊಂಡಿದ್ದು, ಪ್ರಕರಣದ ಆಳ ತನಿಖೆ ನಡೆಸುವುದಾಗಿ ಕೊಚ್ಚಿ ಪೊಲೀಸರು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಭೂಗತ ಪಾತಕಿ, ಮಾದಕ ವಸ್ತುವಿನ ಡೀಲರ್ ಓಂ ಪ್ರಕಾಶ್ ಅನ್ನು ಮರಡು ಪೊಲೀಸರು ಹೊಟೇಲ್ ಒಂದರಲ್ಲಿ ಬಂಧಿಸಿದ್ದರು. ಆತನ ಬಂಧಿಸಿದಾಗ ಹೊಟೇಲ್ ನಲ್ಲಿ ಡ್ರಗ್ಸ್ ಸಹ ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಹೊಟೇಲ್ ಗೆ ಕೆಲ ನಟ-ನಟಿಯರು ಸಹ ಬಂದು ಹೋಗಿರುವುದು ಪತ್ತೆ ಆಗಿದ್ದು, ಅವರ ವಿಚಾರಣೆ ನಡೆಸುವುದಾಗಿ ಕೊಚ್ಚಿ ಪೊಲೀಸರು ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಶ್ರೀನಾಥ್ ಬಾಸಿ ಹಾಗೂ ನಟಿ ಪ್ರಯಾಗಾ ಮಾರ್ಟಿನ್ ಅವರುಗಳು ಓಂ ಪ್ರಕಾಶ್ ತಂಗಿದ್ದ ಹೊಟೇಲ್ಗೆ ಭೇಟಿ ನೀಡಿದ್ದರು ಎನ್ನುವುದು ಪೊಲೀಸರಿಗೆ ತಿಳಿದು ಬಂದಿದ್ದು, ಅವರಿಬ್ಬರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ
ಈ ನಡುವೆ ನಟಿ ಪ್ರಯಾಗಾ ಮಾರ್ಟಿನ್ ಅವರ ಕುಟುಂಬದವರು ನಟಿಯು ಡ್ರಗ್ಸ್ ಪ್ರಕರಣದೊಂದಿಗೆ ಸಂಬಂಧ ಹೊಂದಿಲ್ಲ ಎಂದಿದ್ದಾರೆ. ಆದರೆ ಶ್ರೀನಾಥ್ ಬಾಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.