ಜಲ್ಲಿ ಕಲ್ಲುಗಳ ನಡುವೆ ಇದ್ದ ಜಿಲೆಟಿನ್ ಕಡ್ಡಿ ಸ್ಫೋಟ: ವಿದ್ಯಾರ್ಥಿಯ ಕೈ ಬೆರಳು ಕಟ್

ಹೊಸ ದಿಗಂತ ವರದಿ,ಗುಬ್ಬಿ:

ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅವಶ್ಯ ಜಲ್ಲಿ ಕಲ್ಲುಗಳ ನಡುವೆ ಉಳಿದಿದ್ದ ಜೀವಂತ ಜಿಲೆಟಿನ್ ಕಡ್ಡಿ ಬಗ್ಗೆ ಅರಿಯದ ವಿದ್ಯಾರ್ಥಿಯೊಬ್ಬ ಕುತೂಹಲದಲ್ಲಿ ಜಿಲೆಟಿನ್ ಕಡ್ಡಿ ಮುಟ್ಟಿ ಸ್ಫೋಟ ಉಂಟಾಗಿ ವಿದ್ಯಾರ್ಥಿ ಕೈ ಬೆರಳುಗಳು ತುಂಡಾಗಿ ಆಸ್ಪತ್ರೆಗೆ ದಾಖಲಾದ ಆತಂಕದ ಘಟನೆ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ನಡೆದಿದೆ.

ಇಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಸರಾ ರಜೆ ಹಿನ್ನಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸ್ಪೆಷಲ್ ಕ್ಲಾಸ್ ಗಾಗಿ ಆಗಮಿಸುತ್ತಿದ್ದ ಸಮಯದಲ್ಲಿ ಇಡಗೂರು ಗ್ರಾಮದ ವಿದ್ಯಾರ್ಥಿ ಮೋನಿಶ್ ಗೌಡ(15) ಕಲ್ಲು ಬಂಡೆ ಚೂರುಗಳ ಮಧ್ಯೆ ಕಂಡ ವೈರ್ ಸಹಿತ ಇದ್ದ ಜಿಲೆಟಿನ್ ಕಡ್ಡಿ ಕಂಡು ಕುತೂಹಲದಿಂದ ತೆಗೆದುಕೊಂಡು ಶಾಲಾ ಆವರಣದಲ್ಲಿ ತೆರಳಿದ ನಂತರ ಬಿಸಿಯಾದ ಅನುಭವಕ್ಕೆ ಭಯಗೊಂಡು ಜಿಲೆಟಿನ್ ಕಡ್ಡಿ ಎಸೆಯುವ ಮುಂದಾದಾಗ ಸ್ಫೋಟಗೊಂಡು ಬಲಗೈ ಬೆರಳುಗಳು ತುಂಡಾಗಿದೆ. ಸುಮಾರು ಒಂದು ಕಿಮೀ ಸುತ್ತಳತೆಯಲ್ಲಿ ಇಡೀ ಗ್ರಾಮಕ್ಕೆ ಕೇಳಿಸಿದ ಸ್ಫೋಟದ ಶಬ್ದ ಇಡೀ ಗ್ರಾಮಸ್ಥರಿಗೆ ಆತಂಕ ತಂದಿದೆ.

ಹಳ್ಳ ಮುಚ್ಚಲು ಬೆಳ್ಳೂರು ಕ್ರಾಸ್ ಸಮೀಪದಿಂದ ತಂದ ಬಂಡೆ ಕಲ್ಲುಗಳ ರಾಶಿಯಲ್ಲಿ ವೈರ್ ಸಹಿತ ಜಿಲೆಟಿನ್ ಕಡ್ಡಿಗಳು ಕಾಣುತ್ತಿದ್ದು, ಈ ಬಂಡೆ ಕಲ್ಲುಗಳ ಮಧ್ಯೆ ಕಾಣುವ ವೈರ್ ಕುತೂಹಲದಲ್ಲಿ ಬಾಲಕ ಮುಟ್ಟಿದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಸ್ಪೆಷಲ್ ಕ್ಲಾಸ್ ಗಾಗಿ ಆಗಮಿಸಿದ್ದ ಮಕ್ಕಳು, ಶಿಕ್ಷಕರು ಆತಂಕದಲ್ಲಿ ಮುಳುಗಿದರು. ಭಯದ ವಾತಾವರಣ ಮಧ್ಯೆ ಕೂಡಲೇ ಗಾಯಾಳು ವಿದ್ಯಾರ್ಥಿಯನ್ನು ತುಮಕೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಯಿತು.

ಸ್ಥಳಕ್ಕೆ ಆಗಮಿಸಿದ ಸಿಪಿಐ ಗೋಪಿನಾಥ್ ತಕ್ಷಣ ಘಟನೆ ನಡೆದ ಸ್ಥಳ ಪರಿಶೀಲಿಸಿ ಇನ್ನೂ ಜೀವಂತ ಜಿಲೆಟಿನ್ ಕಡ್ಡಿ ಇರುವ ಬಗ್ಗೆ ಖಚಿತ ಮಾಡಿಕೊಂಡು ಕೂಡಲೇ ಈ ಕಲ್ಲು ರಾಶಿ ಸುತ್ತಲಿನ ನೂರು ಮೀಟರ್ ನಿರ್ಬಂಧಿಸಿ ಮರಳು ತಂದು ಜಿಲೆಟಿನ್ ಕಡ್ಡಿ ಕಂಡ ಎಲ್ಲಾ ಕಲ್ಲು ಬಂಡೆ ರಾಶಿಯನ್ನು ಸುರಕ್ಷಿತಗೊಳಿಸಿದರು. ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗುವ ಮೂಲಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡರು.

ಸ್ಥಳಕ್ಕೆ ಭೂ ಮತ್ತು ಗಣಿಗಾರಿಕೆ ಉಪ ನಿರ್ದೇಶಕ ಲೋಕೇಶ್ ಕುಮಾರ್ ಹಾಗೂ ಭೂ ವಿಜ್ಞಾನಿ ಸಂತೋಷ್ ಕುಮಾರ್ ಜೆಲಟಿನ್ ಕಡ್ಡಿ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್, ಕಂದಾಯ ನಿರೀಕ್ಷಕಿ ಪ್ರಮೀಳಾ, ಗ್ರಾಮ ಲೆಕ್ಕಿಗ ಅಭಿಷೇಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!