ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಬಹುಕೋಟಿ ವಾಲ್ಮೀಕಿ ಹಗರಣ ಮಾಸ್ಟರ್‌ಮೈಂಡ್: ಇಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಸ್ಪೋಟಕ ಮಾಹಿತಿ ಹಂಚಿಕೊಂಡಿದ್ದು, ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರು ಹಗರಣದ “ಮಾಸ್ಟರ್‌ಮೈಂಡ್” ಆಗಿದ್ದು, ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ರಾಜ್ಯ ಸರ್ಕಾರದ ಸಂಸ್ಥೆಯಿಂದ ಬೇರೆಡೆಗೆ ವರ್ಗಾಯಿಸಲಾದ ಹಣವನ್ನು ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಹೇಳಿದೆ.

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ ಇಂದು ಬೆಂಗಳೂರಿನ ಜನಪ್ರತಿನಿಗಳ ವಿಶೇಷ ನ್ಯಾಯಾಲಯಕ್ಕೆ 24 ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಪ್ರಕರಣದಲ್ಲಿ ನಾಗೇಂದ್ರ ಮಾಸ್ಟರ್‌ ಮೈಂಡ್ ಎಂದು ಇಡಿ ಉಲ್ಲೇಖಿಸಿದೆ. ಸತ್ಯನಾರಾಯಣ ವರ್ಮಾ, ಪದ್ಮನಾಭ, ನಾಗೇಶ್‌ರಾವ್, ನೆಕ್ಕಂಟಿ ನಾಗರಾಜ್, ವಿಜಯ್‌ಕುಮಾರ್ ಸೇರಿ 24 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ಸತ್ಯನಾರಾಯಣ ವರ್ಮ, ಏಟಕಾರಿ ಸತ್ಯನಾರಾಯಣ, ಜೆ.ಜಿ.ಪದ್ಮನಾಭ, ನಾಗೇಶ್ವರ್ ರಾವ್, ನೆಕ್ಕೆಂಟಿ ನಾಗರಾಜ್ ಮತ್ತು ವಿಜಯ್ ಕುಮಾರ್ ಗೌಡ ಅವರಂತಹ ಪ್ರಮುಖ ಸಹಚರರು ಸೇರಿದಂತೆ 24 ಮಂದಿಯ ಸಹಾಯದಿಂದ ಈ ಹಗರಣ ನಡೆದಿದ್ದು, ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಪ್ರಾಥಮಿಕ ಆರೋಪಿ ಮತ್ತು ಮಾಸ್ಟರ್ ಮೈಂಡ್ ಎಂದು ಹೆಸರಿಸಿರುವುದಾಗಿ ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬಿ ನಾಗೇಂದ್ರ ಅವರ ಪ್ರಭಾವದಿಂದ ನಿಗಮದ(ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ) ಖಾತೆಯನ್ನು ಯಾವುದೇ ಸರಿಯಾದ ಅನುಮತಿಯಿಲ್ಲದೆ ಎಂಜಿ ರಸ್ತೆಯ ಶಾಖೆಗೆ ವರ್ಗಾಯಿಸಲಾಗಿದೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಹಣದ ಅಕ್ರಮ ವರ್ಗಾವಣೆಯಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ.

2024ರ ಲೋಕಸಭೆ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಬೆಂಬಲಿಸಲು ಹಾಗೂ ಬಿ ನಾಗೇಂದ್ರ ಅವರ ವೈಯಕ್ತಿಕ ವೆಚ್ಚಕ್ಕಾಗಿ 20.19 ಕೋಟಿ ರೂ.ಗಳನ್ನು ಬಳಸಲಾಗಿದೆ ಎಂದು ಇಡಿ ಹೇಳಿದೆ.

ನಾಗೇಂದ್ರ ಅವರ ಸೂಚನೆಯಂತೆಯೇ ಸಂಪೂರ್ಣವಾಗಿ ಹಣಕಾಸು ವಹಿವಾಟು ನಡೆದಿದೆ. ತಾನು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಈ ವೆಚ್ಚಗಳ ಸಾಕ್ಷ್ಯ ಪತ್ತೆಯಾಗಿದೆ ಮತ್ತು ಆರ್ಥಿಕ ವಿಶ್ಲೇಷಣೆ ಮತ್ತು ಹೇಳಿಕೆಗಳಿಂದ ಇದನ್ನು ದೃಢೀಕರಿಸಲಾಗಿದೆ ಎಂದು ಇಡಿ ತಿಳಿಸಿದೆ.

ವಾಲ್ಮೀಕಿ ನಿಗಮದ ಹಗರಣದಲ್ಲಿಇಡಿ ಅಧಿಕಾರಿಗಳು ಜುಲೈ 11ರಂದು ನಾಗೇಂದ್ರರನ್ನು ಬಂಧಿಸಿದ್ದರು. ಅಂದಿನಿಂದ ನಾಗೇಂದ್ರ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯ ಎಸ್‌ಐಟಿ ಅಧಿಕಾರಿಗಳು ಆಗಸ್ಟ್‌ನಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ನಾಗೇಂದ್ರರ ಹೆಸರನ್ನು ಉಲ್ಲೇಖಿಸದೆ ಕೇವಲ ಅಧಿಕಾರಿಗಳ ಪಾತ್ರದ ಕುರಿತ ವಿವರ ದಾಖಲಿಸಿದ್ದರು. ಆದರೆ, ಇಡಿ ಅಧಿಕಾರಿಗಳು ಎಸ್‌ಐಟಿ ತನಿಖೆಗೆ ವಿರುದ್ಧವಾಗಿ ನಾಗೇಂದ್ರ ಅವರೇ ಹಗರಣದ ಮಾಸ್ಟರ್ ಮೈಂಡ್ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!