ಹೊಸದಿಗಂತ ಡಿಜಿಟಲ್ ಡೆಸ್ಕ್:
2000 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ನ ಪ್ರಾದೇಶಿಕ ಕಚೇರಿಯಲ್ಲಿ ಬದಲಾವಣೆಗೆ ಯತ್ನಿಸಿದ ಐವರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಎ.ಕೆ.ಅಫೈಲ್ ಹುಸೇನ್ (29), ಪ್ರಸೀತ್ (47), ಮೊಹಮ್ಮದ್ ಆಫ್ಘಾಸ್ (34), ನೂರುದ್ದೀನ್ ಅಲಿಯಾಸ್ ಅನ್ವರ್ (34) ಹಾಗೂ ಪ್ರಿಯೇಶ್ (34) ಎಂದು ಗುರ್ತಿಸಲಾಗಿದೆ.
ಆರೋಪಿಗಳಿಂದ ಮುದ್ರಣ ಯಂತ್ರ, ಕರೆನ್ಸಿ ಪೇಪರ್ಸ್ ಮತ್ತು ರೂ.54 ಲಕ್ಷ ಮೌಲ್ಯದ ಎರಡು ಸಾವಿರ ರುಪಾಯಿ ಮುಖಬೆಲೆಯ ನಕಲಿ ನೋಟುಗಳು ಹಾಗೂ 2 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.
ಸೆಪ್ಟೆಂಬರ್ 9 ರಂದು ಬಳ್ಳಾರಿಯ ಸಿರುಗುಪ್ಪದ ಅಫ್ಜಲ್ ಹುಸೇನ್ (29) ಬೆಂಗಳೂರಿನ ಆರ್ಬಿಐನ ಪ್ರಾದೇಶಿಕ ಕಚೇರಿಗೆ 2,000 ರೂ.ಗಳ 1,234 ನೋಟುಗಳೊಂದಿಗೆ ಭೇಟಿ ನೀಡಿದ್ದು, 24.68 ಲಕ್ಷ ರೂ.ಗಳ ಮೊತ್ತವನ್ನು 500 ರೂ ನೋಟುಗಳಿಗೆ ಬದಲಾಯಿಸಲು ಮುಂದಾಗಿದ್ದರು.
ಈ ವೇಳೆ ನೋಟುಗಳ ಪರಿಶೀಲಿಸಿದ ಬ್ಯಾಂಕ್ ಅಧಿಕಾರಿಗಳಿಗೆ ನಕಲಿ ನೋಟುಗಳು ಎಂಬುದು ತಿಳಿದುಬಂದಿದೆ ಕೂಡಲೇ ಅಫ್ಜಲ್ ನನ್ನು ಮುಂದಿನ ತನಿಖೆಗಾಗಿ ನಕಲಿ ನೋಟುಗಳ ಸಮೇತ ಹಲಸೂರು ಗೇಟ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.