ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಶಕ್ತಿ ಪೀಠಗಳ ದೇವಾಲಯಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಸರ್ಕಾರಿ ಸಮಿತಿಯು ವಸ್ತ್ರ ಸಂಹಿತೆ ಜಾರಿ ಮಾಡಿದೆ.
ದೇವಾಲಯದ ಮುಖ್ಯ ದ್ವಾರದಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ಉಡುಗೆ ತೊಡುಗೆಯ ಸೂಚನೆಗಳ ಬೋರ್ಡ್ ಇದೆ. ಈ ಹಿಂದೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು, ಈಗ ಮಾರಿಕಾಂಬಾ ದೇವಸ್ಥಾನದಲ್ಲೂ ಜಾರಿಯಲ್ಲಿದೆ.
ಮುಜರಾಯಿ ಇಲಾಖೆಯು ಜನರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ದೇವಾಲಯಗಳಲ್ಲಿ ದೇವರ ದರ್ಶನ ಮಾಡುವಂತೆ ಆದೇಶಿಸಿದೆ. ಇದರಿಂದಾಗಿ ಶಿರಸಿ ಹಾಗೂ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಲಾಗಿದೆ.
ನವರಾತ್ರಿ ನಿಮಿತ್ತ ಹೆಚ್ಚು ಭಕ್ತರು ಆಗಮಿಸಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಕಡ್ಡಾಯ ಮಾಡುವ ಉದ್ದೇಶವಿದೆ.