ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬಹ್ರೈಚ್ನ ಹಳ್ಳಿಯೊಂದರಲ್ಲಿ ದುರ್ಗಾದೇವಿ ಮೂರ್ತಿ ವಿಸರ್ಜಣೆ ವೇಳೆ ಎರಡು ಗುಂಪುಗಳ ನಡುವೆ ಕೋಮು ಸಂಘರ್ಷ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟ ಪರಿಣಾಮ ಹಲವು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಬಹ್ರೈಚ್ನ ಮಹ್ಸಿ ಉಪವಿಭಾಗದ ಮೂಲಕ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದಾಗ ಘರ್ಷಣೆಗಳು ಭುಗಿಲೆದ್ದವು. ಘರ್ಷಣೆಯ ನಂತರ ಜಿಲ್ಲಾಡಳಿತವು ಮಹ್ಸಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ 30 ಜನರನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಹತ್ತು ಜನರಲ್ಲಿ ಆರು ಜನರನ್ನು ಅಬ್ದುಲ್ ಹಮೀದ್, ಸರ್ಫರಾಜ್, ಫಹೀಮ್, ಸಾಹಿರ್ ಖಾನ್, ನಂಕೌ ಮತ್ತು ಮಾರ್ಫ್ ಅಲಿ ಎಂದು ಗುರುತಿಸಿದೆ ಬಾಕಿ ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಬೇಕಿದೆ.
ಗಲಭೆಕೋರರ ವಿರುದ್ಧ ಕಠಿಣ ಕ್ರಮ:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯನ್ನು ಖಂಡಿಸಿದ್ದಾರೆ. ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದವರನ್ನು ಬಿಡಲಾಗುವುದಿಲ್ಲ. ಎಲ್ಲರಿಗೂ ಸುರಕ್ಷತೆಯ ಭರವಸೆ ಇದೆ, ಆದರೆ ಗಲಭೆಕೋರರನ್ನು ಮತ್ತು ಘಟನೆಗೆ ಕಾರಣವಾದವರ ನಿರ್ಲಕ್ಷ್ಯವನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.