ಹೊಸದಿಗಂತವರದಿ,ಮಂಗಳೂರು:
ಶೃಂಗೇರಿ ಸೇರಿದಂತೆ ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ ಬಂದಾಗ ಮನಸ್ಸಿಗೆ ತುಂಬಾನೆ ನೆಮ್ಮದಿ ಸಿಗುತ್ತದೆ.ಹಾಗಾಗಿ ಕರಾವಳಿಗೆ ಬಂದಾಗಲೆಲ್ಲ ಇಲ್ಲಿನ ಕಾರಣೀಕ ಕ್ಷೇತ್ರಗಳಿಗೆ ಭೇಟಿ ನೀಡಿ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆಂದು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಸೋಮವಾರದಂದು ಶಿವರಾಜ್ ಕುಮಾರ್ ,ಗೀತಾ ದಂಪತಿ ಭೇಟಿ ನೀಡಿ ಅಜ್ಜನ ಕಟ್ಟೆಗೆ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ನಟ ಶಿವರಾಜ್ ಕುಮಾರ್ ಅವರು ಶೃಂಗೇರಿ ಮಠ ಸೇರಿದಂತೆ ಕರಾವಳಿಯ ಉಡುಪಿ ಶ್ರೀ ಕೃಷ್ಣ ಮಠ,ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ,ವನದೇವತೆ,ಕೊರಗಜ್ಜನ ಕ್ಷೇತ್ರಗಳನ್ನ ಸಂದರ್ಶಿಸುತ್ತಾ ಬಂದಿದ್ದೇನೆ. ಎಲ್ಲಾ ಸಾನಿಧ್ಯಗಳಿಗೂ ಭೇಟಿ ಕೊಟ್ಟಾಗ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ.ಸದೃಢ ನಂಬಿಕೆ ಜೊತೆ ಜೀವನ ಚೆನ್ನಾಗಿರಲಿ ಎಂದು ಭಕ್ತಿಯಿಂದ ಪ್ರಾರ್ಥಿಸಲು ಕೊರಗಜ್ಜನ ಕ್ಷೇತ್ರಕ್ಕೆ ಬಂದಿದ್ದೇನೆ.
ನ.15ರ ಆಸುಪಾಸಿನಲ್ಲಿ ಅರ್ಜುನ್ ಜನ್ಯ ನಿರ್ದೇಶಿಸಿರುವ ರಿಯಲ್ ಸ್ಟಾರ್ ಉಪೇಂದ್ರ ,ರಾಜ್ ಬಿ.ಶೆಟ್ಟಿ ಜತೆ ತಾನು ನಟಿಸಿರುವ ಫಾರ್ಟಿಫೈವ್ ಚಿತ್ರ ತೆರೆಕಾಣಲಿದೆ.ಮತ್ತೊಂದು ಚಿತ್ರ ನಿರ್ಮಾಣದ ಬಗ್ಗೆಯೂ ಸಿದ್ಧತೆ ನಡೆದಿದ್ದು ,ಶೀಘ್ರವೇ ಪ್ರಾಜೆಕ್ಟ್ ಆರಂಭವಾಗಲಿದೆ ಎಂದರು.
ಈ ವೇಳೆ ಚಿತ್ರ ನಿರ್ಮಾಪಕರಾದ ಶ್ರೀಕಾಂತ್,ರಾಜೇಶ್ ಭಟ್, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ,ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದು ಶಿವರಾಜ್ ಕುಮಾರ್ ,ಗೀತಾ ದಂಪತಿಯನ್ನ ಕ್ಷೇತ್ರದ ಪರವಾಗಿ ಅಭಿನಂದಿಸಿದರು.
ಶ್ರೀ ವನದುರ್ಗೆ ದೇಗುಲಕ್ಕೂ ಭೇಟಿ
ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾಶಿವರಾಜ್ ಕುಮಾರ್ ಅವರು ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗೆ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ದೇವರ ದರುಶನ ಪಡೆದರು.