ಹೊಸದಿಗಂತವರದಿ,ಬೀದರ್:
ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರ ಆಪ್ತ ಸಂಜುಕುಮಾರ ಸುಗರೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಭಾನುವಾರ ಬೆಳಿಗ್ಗಿನ ಜಾವ 4ರ ಸುಮಾರಿಗೆ ಬಸವಕಲ್ಯಾಣದ ಜೈಶಂಕರ ಕಾಲೋನಿಯ ತಮ್ಮ ನಿವಾಸದಿಂದ ತೆರಳಿದ ಇವರ ಸುಳಿವು ಇನ್ನೂ ಸಿಕ್ಕಿಲ್ಲ. ಇದು ಒಂದೆಡೆ ಕುಟುಂಬದವರಲ್ಲಿ ಆತಂಕ ಮೂಡಿಸಿದರೆ, ಇನ್ನೊಂದೆಡೆ ಕ್ಷೇತ್ರದ ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ.
ತಮ್ಮ ಮನೆಯಿಂದ ಭಾನುವಾರ ಬೆಳಿಗ್ಗಿನ ಜಾವ ಸುಗರೆ ಅವರು ಕಾಲ್ನಡಿಗೆಯಲ್ಲೇ ಹೊರಹೋಗಿದ್ದಾರೆ. ತಮ್ಮ ಎರಡು ಫೋನ್ ಗಳು ಮನೆಯಲ್ಲಿ ಇಟ್ಟಿದ್ದಾರೆ. ಇವರು ಮನೆಯಿಂದ ಒಬ್ಬರೇ ಹೋಗುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಎಲ್ಲಿಗೆ ಹೋದರು? ಮನೆಯವರಿಗೆ ಏನೂ ಹೇಳದೆ, ಕೇಳದೆ ಏಕೆ ಹೋದರು? ಸದ್ಯ ಎಲ್ಲಿದ್ದಾರೆ? ಹೇಗಿದ್ದಾರೆ ಎಂಬುದು ಗೊತ್ತಾಗಿಲ್ಲ. ಈ ಸಂಬಂಧ ಸುಗರೆ ಪುತ್ರ ಬಸವಕಲ್ಯಾಣ ನಗರ ಠಾಣೆಗೆ ದೂರು ನೀಡಿದ್ದು, ತಂದೆಯ ಪತ್ತೆಗೆ ಮೊರೆಯಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಗರೆ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇವರ ಎರಡೂ ಮೊಬೈಲ್ ಫೋನ್ ಗಳನ್ನು ಸಹ ವಶಕ್ಕೆ ಪಡೆದಿದ್ದು, ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿವಿಧೆಡೆಯ ಸಿಸಿಟಿವಿ ದೃಶ್ಯಾವಳಿ ಸಹ ಪರಿಶೀಲನೆ ಮಾಡುತ್ತಿದ್ದಾರೆ.